

ಹಾನಗಲ್ಲ: ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಅಧಿಕ ಮಳೆಯಿಂದ ನದಿ ಅಕ್ಕಪಕ್ಕದ ಮತ್ತು ಕೆರೆ ಹಿನ್ನೀರಿನಲ್ಲಿರುವ ರೈತರ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಅಂತಹ ರೈತರಿಗೆ ಪರಿಹಾರ ನೀಡಬೇಕು. ಕಳೆದ ವರ್ಷ ಕೃಷಿ ವಲಯ ತೀವ್ರ ಬರಗಾಲ ಅನುಭವಿಸಿದ್ದು, ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ ಮಾತ್ರ ರೈತರಿಗೆ ಪರಿಹಾರ ವಿತರಿಸಲಾಗಿದೆ. ರಾಜ್ಯ ಸರ್ಕಾರದಿಂದ ಪರಿಹಾರ ನೀಡಿಲ್ಲ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ಪರಿಹಾರದ ಜತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪರಿಹಾರ ವಿತರಿಸಿತ್ತು. ಅದೇ ಮಾದರಿಯಲ್ಲಿ ರೈತರ ನೆರವಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ತೋಟಗಾರಿಕಾ ಬೆಳೆಗಳಾದ ಅಡಕೆ, ಶುಂಠಿ ಮತ್ತು ಮಾವು ಬೆಳೆಗಳಿಗೆ ಹವಾಮಾನ ಆಧಾರಿತ ವಿಮಾ ಕಂತು ಭರಿಸಲು ಜು. 31 ಕೊನೆ ದಿನವಾಗಿದ್ದು, ಇನ್ನೂ 15 ದಿನ ಕಾಲಾವಕಾಶ ನೀಡಬೇಕು. ಅಡಕೆ ಮತ್ತು ಶುಂಠಿ ಬೆಳೆಗಳಿಗೆ ಕಳೆದ ವರ್ಷದ ವಿಮಾ ಪರಿಹಾರ ಈವರೆಗೂ ಜಮಾ ಆಗಿಲ್ಲ, ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಕೊಳವೆ ಬಾವಿಗಳಿಗೆ ಆರ್.ಆರ್. ನಂಬರ್ ನೀಡುವುದನ್ನು ಈ ಮೊದಲಿನಂತೆ ಮುಂದುವರಿಸಿ ಅವಶ್ಯವಿರುವೆಡೆ ಹೊಸ ಕಂಬ, ವಿದ್ಯುತ್ ತಂತಿ ಹಾಗೂ ಪರಿವರ್ತಕ ಅಳವಡಿಸಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ರೈತರಿಗೆ 3 ತಿಂಗಳ ಒಳಗೆ ಕೃಷಿ ಇಲಾಖೆ, 6 ತಿಂಗಳ ಒಳಗೆ ಜಂಟಿ ಕೃಷಿ ಇಲಾಖೆಗೆ ಅರ್ಜಿ ಕೊಡಬೇಕು ಎಂಬುದನ್ನು ಪರಿಗಣಿಸದೇ ಎಲ್ಲ ದಾಖಲಾತಿ ಸಂಗ್ರಹಿಸಿ ಎಫ್ಐಆರ್ ದಾಖಲಾದ ಆಧಾರದ ಮೇಲೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಮಲ್ಲೇಶಪ್ಪ ಪರಪ್ಪನವರ, ಮಹಾಲಿಂಗಪ್ಪ ಅಕ್ಕಿವಳ್ಳಿ, ಬಾಬಣ್ಣ ವರ್ದಿ, ರುದ್ರಣ್ಣ ಹಣ್ಣಿ, ಮುತ್ತಪ್ಪ ಹಾವನೂರು, ಮೌಲಾಸಾಬ ಅಗಸರ, ಶಾಂತಪ್ಪ ಗೌಡ್ರು, ಶ್ರೀಧರ ಮಲಗುಂದ, ರಾಜೀವ ದಾನಪ್ಪನವರ, ಎಂ.ಎಂ. ಬಡಗಿ, ಹರೀಶ ಹೊಸಮನಿ, ಇಬ್ರಾಹಿಂ ಕಲ್ಲಾಪುರ ಇತರರಿದ್ದರು.