ವಿದ್ಯಾರ್ಥಿಗಳಲ್ಲಿ ದೇಶ ಸೇವಾ ಮನೋಭಾಗ ಮೂಡಲಿ

1004547146
Published on

ಚನ್ನಪಟ್ಟಣ

ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ ಹಾಗೂ ದೇಶ ಸೇವಾ ಮನೋಭಾವನೆ ಬೆಳೆಸಲು ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಗಳು ಪೂರಕವಾಗಿವೆ ಎಂದು ಜ್ಞಾನ ಸರೋವರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರಾಹುಲ್ ರಾಜೇ ಅರಸು ತಿಳಿಸಿದರು.

ತಾಲೂಕಿನ  ಬಿ. ವಿ ಹಳ್ಳಿ ಗ್ರಾಮದಲ್ಲಿ ಜ್ಞಾನ ಸರೋವರ ಪದವಿ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದೇಶ ಸಮನ್ವಯತೆಯ ಬೀಡಾಗಿದೆ. ಶಾಂತಿ, ಸಹಬಾಳ್ವೆ, ಸಹೋದರತೆ ಬಯಸುವ ದೇಶ ನಮ್ಮದು. ದೇಶದ ಹಿತವೇ ನಮ್ಮ ಹಿತ ಎಂಬ ಭಾವನೆ ಪ್ರತಿಯೊಬ್ಬ ಭಾರತೀಯನಲ್ಲಿಯೂ ಬರಬೇಕು. ಯುವಕರು ತಮ್ಮ ವೈಯಕ್ತಿಕ ಬೆಳವಣಿಗೆ ಜೊತೆಗೆ ದೇಶದ ಬೆಳವಣಿಗೆಯಲ್ಲೂ ಒಂದಿಷ್ಟು ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಬಿ.ಟಿ ನಾಗೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂದಿಗೂ ಪರಸ್ಪರ ಸಹೋದರ ಭಾವ ಬಲವಾಗಿದೆ. ಭಾರತೀಯ ಮೌಲ್ಯಯುತ ಸಂಸ್ಕೃತಿಯೇ ಇದಕ್ಕೆ ಕಾರಣ‌. ವಿದ್ಯಾರ್ಥಿಗಳಲ್ಲಿ ಶ್ರಮ ಸಂಸ್ಕೃತಿ ಹಾಗೂ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರ ಉಪಯುಕ್ತ. ವಿದ್ಯಾರ್ಥಿಗಳು ಸಹನೆ, ಸಮಯ ಪ್ರಜ್ಞೆ, ಆತ್ಮ ವಿಶ್ವಾಸ, ಪರಿಶ್ರಮದಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಎಚ್. ಹೇಮಲತಾ  ಮಾತನಾಡಿ, ಗ್ರಾಮಗಳು ಅಭಿವೃದ್ಧಿ ಯಾದಾಗ‌ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ಪ್ರತಿಯೊಬ್ಬರು ಸಾವಲಂಬಿ ಬದುಕು ಸಾಗಿಸಲು ಶ್ರಮಿಸಬೇಕು.  ಶಿಬಿರಗಳಿಗೆ ಸ್ಥಳಿಯ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯ ಸರ್ಕಾರಗಳು ಮತ್ತು ಅಧಿಕಾರಿಗಳು ಹೆಚ್ಚು ಸಹಕರಿಸಿದಾಗ ಮಾತ್ರ ಶಿಬಿರಗಳಿಗೆ ಮಹತ್ವ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಶಿವ ಮಲ್ಲೇಗೌಡ, ದೊಡ್ಡೇಗೌಡ, ಪಾಪಯ್ಯ (ದೊರೆಸ್ವಾಮಿ), ಬಿ.ಪಿ ಕೃಷ್ಣೇಗೌಡ , ಶಿಬಿರಾಧಿಕಾರಿ ಎಚ್.ಸಿ ಹೊಳಸಾಲಯ್ಯ ದಾನವ್ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net