

ಪಾವಗಡ: ದೇಶಕ್ಕೆ ಅನ್ನ ಕೊಟ್ಟು ಸುಖೀಭವ ಎಂದು ಆಶೀರ್ವದಿಸುವ ಒಕ್ಕಲಿಗ ಸಮಾಜ ಪಾವಗಡ ತಾಲೂಕಿನಲ್ಲಿ ಮತ್ತಷ್ಟು ಸಂಘಟಿತರಾಗಿ ಅಭಿವೃದ್ಧಿಯಾಗಬೇಕಿದೆ ಎಂದು ಆದಿಚುಂಚನಗಿರಿ ಸಂಸ್ಥಾನದ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೆ.ಟಿ.ಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡ ಯುವಕ ಸಂಘದಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಕ್ಕಲಿಗ ಸಮಾಜ ಕೃಷಿ ಅವಲಂಭಿತ ಸಮಾಜವಾಗಿದ್ದು, ಈ ಭಾಗದಲ್ಲಿ ಸಮುದಾಯದ ಅಭಿವೃದ್ಧಿಗಾಗಿ ನೀರಾವರಿ ಯೋಜನೆಗಳು ಅನುಷ್ಠಾನವಾಗಬೇಕು. ಜನತೆ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕು. ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆದಿಚುಂಚನಗಿರಿ ಸಂಸ್ಥೆಯಿಂದ ಮಧುಗಿರಿ, -ಕೊರಟಗೆರೆ ಭಾಗದಲ್ಲಿ ಕೃಷಿ ವಿಜ್ಞಾನ ಕಾಲೇಜು ಪ್ರಾರಂಭಿಸಲು ಸಿದ್ದತೆ ನಡೆಯುತ್ತಿವೆ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕೆಂಪೇಗೌಡರು ಕೋಟೆ, ಪೇಟೆಗಳ ನಿಮಾರ್ಣದ ಮೂಲಕ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಕೆರೆ ಕಟ್ಟೆಗಳ ನಿಮಾರ್ಣ, ಮಾರುಕಟ್ಟೆಗಳ ನಿಮಾರ್ಣ ಮಾಡಿದ್ದ ಅವರು ತಮ್ಮ ಆಳ್ವೆಕೆಯ ಕಾಲದಲ್ಲೇ ಆಧುನಿಕತೆಯನ್ನು ಪರಿಚಯಿಸಿ ಇಡೀ ಪ್ರಪಂಚವನ್ನೇ ಆಕರ್ಷಿಸುವ ಬೆಂಗಳೂರು ನಿರ್ಮಿಸಿದ ಕೀರ್ತಿ ಅವರದ್ದಾಗಿದೆ ಎಂದರು.
ಶಾಸಕ ಜಯಚಂದ್ರ ಮಾತನಾಡಿ, ಸರ್ಕಾರದ ಸವಲತ್ತು ಪಡೆಯುವ ಉದ್ದೇಶದಿಂದ ಸಮೀಕ್ಷೆಯಲ್ಲಿ ಜಾತಿ ಒಕ್ಕಲಿಗ, ಉಪಜಾತಿ -ಕುಂಚಿಟಿಗ ಎಂದು ನಮೂದಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ತಿಮ್ಮರಾಯಪ್ಪ, ಅದ್ಯಾಪಕ ತಿಪ್ಪೇಸ್ವಾಮಿ ಹಾಗೂ ಗಣ್ಯರು ಮಾತನಾಡಿದರು.
ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ತಿಪ್ಪೀರಣ್ಣ, ರಾಜ್ಯ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಎಸ್ಆರ್ಗೌಡ, ರಂಗೇಗೌಡ, ಹನುಮಂತೇಗೌಡ, ಈರಣ್ಣ, ನರಸಿಂಹಯ್ಯ, ತಿಮ್ಮಾರೆಡ್ಡಿ, ತಿಪ್ಪೇಸ್ವಾಮಿ, ಮೆಡಿಕಲ್ ಮಂಜು, ಮಂಗಳವಾಡ ರಂಗಣ್ಣ ಇದ್ದರು.