

ಹುಬ್ಬಳ್ಳಿ: ನೀರು ಸಂಗ್ರಹವಾಗುವ ತಾಣಗಳಲ್ಲಿ ಲಾರ್ವಾ ಆಗದಂತೆ ನೋಡಿಕೊಳ್ಳಬೇಕು. ವಾರದಲ್ಲಿ ಒಂದು ದಿನ ಡ್ರೈ ಡೇ ಮಾಡಬೇಕು. ಘನತ್ಯಾಜ್ಯವನ್ನು ಆಗಿಂದಾಗಲೇ ವಿಲೇವಾರಿ ಮಾಡಬೇಕು ಎಂದು ಶಹರ ತಹಸೀಲ್ದಾರ್ ಕಲಗೌಡ ಪಾಟೀಲ ತಿಳಿವಳಿಕೆ ನೀಡಿದರು.
ನಗರದ ಮಿನಿವಿಧಾನ ಸೌಧದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಡೆಂಘಿ, ಮಲೇರಿಯಾ, ಚಿಕೂನ್‌ಗುನ್ಯಾ, ವಾಂತಿ-ಭೇದಿ, ಟೈಫಾಯಿಡ್ ಸೇರಿ ಮುಂತಾದ ಕಾಯಿಲೆಗಳ ಕುರಿತ ತಾಲೂಕು ಮಟ್ಟದ ಅಂತರ ಇಲಾಖಾ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.
ರೋಗ ಬರದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು. ಇದಕ್ಕೆ ವಿವಿಧ ಇಲಾಖೆಗಳ ಸಾಥ್ ಅಗತ್ಯವಾಗಿದೆ ಎಂದರು.
ಗ್ರಾಮೀಣ ತಹಸೀಲ್ದಾರ್ ಜಿ.ಬಿ. ಮಜ್ಜಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಕ್ರಾಮಿಕ ರೋಗ ಹರಡದಂತೆ ಜನರು ಜಾಗೃತರಾಗಬೇಕು. ನೀರು ಎಲ್ಲೆಂದರಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಕುರ್ತಕೋಟಿ, ಕೀಟ ಶಾಸ್ತ್ರಜ್ಞ ಡಾ.ಟಿ.ಪಿ. ಮಂಜುನಾಥ ಮಾತನಾಡಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಹುಲಗಣ್ಣ ಇಂಜಗನರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ಬಾಡಗಿ ನಿರೂಪಿಸಿದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ. ಓಂಕಾರಗೌಡ್ರ ವಂದಿಸಿದರು.