ಬಸವ ಸಮಾಜ ಮತ್ತೆ ಕಟ್ಟುವ ಕೆಲಸವಾಗಲಿ

NIJAGUNANANDA SWAMIJI
Published on

ಮುಂಡರಗಿ: ಬುದ್ಧಿ ಬಳಸುವವರು ಸ್ವಾರ್ಥಿಗಳಾಗುತ್ತಾರೆ. ಹೃದಯವಂತಿಕೆ ಬಳಸುವಂತವರು ಸಮಾಜ ಕಟ್ಟುತ್ತಾರೆ. ದಾರಿ ತಪ್ಪುವ ಸಮಾಜವನ್ನು ತಿದ್ದುವ ಕೆಲಸ ಆಗಬೇಕು. ದೇಶದಲ್ಲಿ ರೈತರಿಲ್ಲದಿದ್ದರೆ ನಾವ್ಯಾರು ಬದುಕುವುದಿಲ್ಲ. ಅನ್ನ ನೀಡುವ ರೈತರಿಗೆ ಗೌರವ ಕೊಡಬೇಕು. ಬಸವ ಸಮಾಜವನ್ನು ಮತ್ತೆ ಕಟ್ಟುವ ಕೆಲಸ ಆಗಬೇಕು ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಶನಿವಾರ ಜರುಗಿದ ಅನುಭಾವಿಗಳ ಅನುಭಾವ ದರ್ಶನ ಪ್ರವಚನದಲ್ಲಿ ಅವರು ಮಾತನಾಡಿದರು. ಸಮಾಜದೊಳಗೆ ಅನ್ನ, ಬಟ್ಟೆ, ಮನೆ, ಜ್ಞಾನ, ಔಷಧ ಪಡೆದುಕೊಂಡ ಮನುಷ್ಯ ಸುಖಿ. ಈ ಐದು ವಿಷಯದ ಮೇಲೆ ಶರಣರು ಸಮಾಜ ಕಟ್ಟುವುದಕ್ಕೆ ಮುಂದಾದರು. ಸಮಾಜವೆಂದರೆ ಸಮೂಹ. ದೇಶದ ನಾಗರಿಕತೆಯ ಬೇರು ಕುಟುಂಬ. ಸಮಾಜ ಪ್ರಾರಂಭವಾಗಿದ್ದು ಕುಟುಂಬದಿಂದ. ಸಮಾಜದ ಮೂಲ ಬೇರು ಕುಟುಂಬ. ಕುಟುಂಬ ಧರ್ಮ ಸರಿಯಾಗಿದ್ದರೆ ಎಲ್ಲವೂ ಸರಿ ಇರುತ್ತದೆ ಎಂದರು.

ಬೈಲೂರ ಶಿಕ್ಷಕ ವಿವೇಕ ಕುರಗುಂದ ಮಾತನಾಡಿ, ಇಡೀ ವಿಶ್ವದಲ್ಲಿ 12ನೇ ಶತಮಾನದಲ್ಲಿ ಶರಣರು ಕಂಡ ಸಮಾಜ ಅದ್ಭುತವಾಗಿತ್ತು. ಅವರು ಸಮಾಜದಲ್ಲಿ ಸಮಾನತೆ ತರುವ ಕೆಲಸ ಮಾಡಿದರು. ಅನುಭಾವದಿಂದ ಕಂಡ ಸಮಾಜ ಗಟ್ಟಿ ಸಮಾಜ. ಶರಣರು ಕಂಡ ಸಮಾಜ, ಶರಣರ ಚಿಂತನೆಗಳ ಮೂಲಕ ಉತ್ತಮ ಸಂಸ್ಕಾರವಂತ ಸಮಾಜ ಕಟ್ಟಬೇಕು. ಬಸವಾದಿ ಶರಣರು ಕಂಡ ಸಮಾಜವು ನಿತ್ಯಸತ್ಯ. ಶರಣರ ಕಾಯಕ ತತ್ತ್ವ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ವಣವಾಗುತ್ತದೆ. ಇಂದಿನ ಮಕ್ಕಳಿಗೆ ಶರಣರ ವಚನಗಳನ್ನು ಅರ್ಥಪೂರ್ಣವಾಗಿ ತಿಳಿಸುವ ಕಾರ್ಯವಾಗಬೇಕು. ಶರಣ ಸಾಹಿತ್ಯ ವಿಶಿಷ್ಟ ಸಾಹಿತ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net