ಸ್ಮಾರ್ಟ್ ಸಿಟಿ ಕಾಮಗಾರಿ ತನಿಖೆಯಾಗಲಿ

Prasanna kumar
ಕೆ.ಬಿ.ಪ್ರಸನ್ನಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆ.ಎನ್.ರಾಮಕೃಷ್ಣ ಇದ್ದರು.
Published on

ಶಿವಮೊಗ್ಗ: ಎರಡು ದಿನಗಳ ಮಳೆಯಿಂದ ಸ್ಮಾರ್ಟ್ ಸಿಟಿ ಕಾಮಗಾರಿ ಬಣ್ಣ ಬಯಲಾಗಿದೆ. ಈ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳು ಕಳಪೆಯಾಗಿವೆ. ಹೀಗಾಗಿ ಇಡೀ ಯೋಜನೆ ಹಾಗೂ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಗೆ ಶಿವಮೊಗ್ಗ ಆಯ್ಕೆಯಾದಾಗ ನಾಗರಿಕರು ಹರ್ಷಗೊಂಡಿದ್ದರು. ನಿಜವಾಗಿಯೂ ನಗರ ಸ್ಮಾರ್ಟ್ ಆಗಲಿದೆ ಎಂದು ಭಾವಿಸಿದ್ದರು. ಈಗ ಅದು ಹುಸಿಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು 960 ಕೋಟಿ ರೂ. ಅನುದಾನದಲ್ಲಿ ಸ್ಮಾಟ್‌ಸಿಟಿ ಯೋಜನೆ ಪೂರ್ಣಗೊಂಡಿದೆ. ರಸ್ತೆ, ಚರಂಡಿ, ಪಾರ್ಕ್ ಹಾಗೂ ಮೂಲ ಸೌಲಭ್ಯಕ್ಕಾಗಿ ಹಣ ಬಳಸಲಾಗಿದೆ. ಸೋಮವಾರ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿತ್ತು. ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಯಿತು. ಈ ಹಾನಿಗೆ ಜಿಲ್ಲಾಡಳಿತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಚರಂಡಿ ಕಳಪೆ ಕಾಮಗಾರಿಯಿಂದ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಕಳಪೆ ಕಾಮಗಾರಿ ತನಿಖೆ ನಡೆಸುವಂತೆ ಹಲವು ಸಂಘಟನೆಗಳು ಹೋರಾಟ ನಡೆಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ದೂರಿದವರೊಬ್ಬರು ಇಂದು ಪೊಲೀಸ್ ಠಾಣೆಗೆ ಅಲೆಯುವಂತಾಗಿದೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿ ಕಡತಗಳನ್ನು ಪರಿಶೀಲಿಸಿ ಎಲ್ಲಿ ಕಳಪೆಯಾಗಿದೆಯೋ ಆ ಕಾಮಗಾರಿಯನ್ನು ಹೊಸದಾಗಿ ಮಾಡಲು ಆದೇಶಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ನಗರಾಧ್ಯಕ್ಷ ದೀಪಕ್‌ಸಿಂಗ್, ಪ್ರಮುಖರಾದ ಕೆ.ಎನ್.ರಾಮಕೃಷ್ಣ, ತ್ಯಾಗರಾಜ್, ಎಚ್.ಎಂ.ಸಂಗಯ್ಯ, ನರಸಿಂಹ ಗಂಧದಮನೆ, ಕೃಷ್ಣ, ಸಂಜಯ್ ಕಶ್ಯಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net