ಮಳಿಗೆ ಬಾಡಿಗೆ ವಸೂಲಿ ಸಮರ್ಪಕವಾಗಿರಲಿ

Oplus_131072
Oplus_131072
Published on


ಚನ್ನರಾಯಪಟ್ಟಣ : ಪುರಸಭಾ ಮಳಿಗೆ ಬಾಡಿಗೆ ವಿಚಾರದಲ್ಲಿ ಗೋಲ್ ಮಾಲ್ ನಡೆಯುತ್ತಿದೆ. ಸರಿಯಾಗಿ ಬಾಡಿಗೆ ವಸೂಲಿಯಾಗುತ್ತಿಲ್ಲ ಎಂದು ಸದಸ್ಯರು ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ರಾಜಿ ಇಲ್ಲ. ನಿದ್ರಾಕ್ಷಿಣ್ಯವಾಗಿ ಬಾಡಿಗೆ ವಸೂಲಿಯಾಗಬೇಕು. ಯಾರ ಒತ್ತಡವನ್ನು ಲೆಕ್ಕಿಸಬೇಡಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಕಾರಿಗಳಿಗೆ ಸೂಚನೆ ನೀಡಿದರು.


ಪುರಸಭಾಧ್ಯಕ್ಷೆ ಬನಶಂಕರಿ ರಘು ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ, ಪುರಸಭೆ ವ್ಯಾಪ್ತಿಯ 230 ಮಳಿಗೆಗಳಿಂದ ಸಮರ್ಪಕ ಬಾಡಿಗೆ ವಸೂಲಿಯಾಗುತ್ತಿಲ್ಲ. ಕೋಟ್ಯಾಂತರ ರೂ. ಬಾಡಿಗೆ ಹಣ ಬಾಕಿಯಿದೆ. ಇದು ಸದಸ್ಯರ ಮೇಲೆ ಸಾರ್ವಜನಿಕರು ಗೂಬೆ ಕೂರಿಸುವ ಕೆಲಸವಾಗುತ್ತಿದೆ ಎಂದು ಸದಸ್ಯ ಸಿ.ಎನ್.ಶಶಿಧರ್ ಅವರ ಆರೋಪಕ್ಕೆ ಅಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಮಾತನಾಡಿದರು.
ಪುರಸಭೆಯ 230 ಮಳಿಗೆಗಳ ಪೈಕಿ 26 ಮಳಿಗೆಗಳು ಕೋರ್ಟ್ ನಲ್ಲಿ ದಾವೆ ಇದ್ದು, ಉಳಿದ ಮಳಿಗೆಗಳಿಂದ 12 ಲಕ್ಷ ರೂ. ಮಾಸಿಕ ಬಾಡಿಗೆ ವಸೂಲಿಯಾಗುತ್ತಿದೆ. ವಾರ್ಷಿಕ 1.5 ಕೋಟಿ ವಸೂಲಿಯಾಗುತ್ತಿದೆ. 2 ಕೋಟಿ ರೂ.ಗೂ ಹೆಚ್ಚು ಬಾಡಿಗೆ ಬಾಕಿ ಇದೆ. ಇದರಿಂದ ಪುರಸಭೆಗೆ ನಷ್ಟ, ಸಮಯಕ್ಕೆ ಸರಿಯಾಗಿ ಬಾಡಿಗೆ ವಸೂಲಿಯಾಗಬೇಕು. ಹೆಚ್ಚಿನ ಹಣ ಬಂದರೇ ಪಟ್ಟಣದ ಅಭಿವೃದ್ಧಿಗೆ ಸಾಧ್ಯವಾಗುತ್ತದೆ ಎಂದರು.


ಇದಕ್ಕೂ ಮುನ್ನಾ ಮಾತನಾಡಿದ ಪುರಸಭೆ ಸದಸ್ಯ ಸಿ.ಎನ್.ಶಶಿಧರ್, ಅಕಾರಿಗಳು ಬಾಡಿಗೆ ಸರಿಯಾಗಿ ವಸೂಲಿ ಮಾಡುತ್ತಿಲ್ಲ. ರಾಜ್ಯದಲ್ಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ಹೆಚ್ಚು ಮಳಿಗೆ ಹೊಂದಿರುವ ಪಟ್ಟಣ ನಮ್ಮದು, ಇರುವ ಎಸ್.ಆರ್. ದರಕ್ಕಿಂತ 10 ಪಟ್ಟು ಹೆಚ್ಚಿಗೆ ಬಾಡಿಗೆ ಹರಾಜು ನಡೆಯುತ್ತದೆ. ಮಳಿಗೆಯೊಂದು ಜಿಎಸ್‌ಟಿ ಸೇರಿ ಮಾಸಿಕ 1 ಲಕ್ಷ ರೂ. ಕ್ಕೂ ಹೆಚ್ಚು ಬಾಡಿಗೆ ನಿಗದಿಯಾಗಿದೆ. ಇಂತಹ ಪ್ರಕರಣ ಸಾಕಷ್ಟಿವೆ. ಪರಸ್ಪರ ಜಿದ್ದಿಗೆ ಬಿದ್ದು ಹೆಚ್ಚಿನ ಹಣಕ್ಕೆ ಹರಾಜು ಕೂಗಿ, ನಾಪತ್ತೆಯಾಗುತ್ತಾರೆ. ಇದಕ್ಕೆ ಹೊಣೆ ಯಾರು, ಇನ್ನೂ ಅಕಾರಿಗಳಿಂದ ವಾರ್ಷಿಕ ಮಳಿಗೆಳಿಂದ ಬರುವ ಬಾಡಿಗೆಯ ಮೊತ್ತದ ಬಗೆ ಮಾಹಿತಿಯಿಲ್ಲ ಎಂದ ಅಸಮಾಧಾನ ವ್ಯಕ್ತಪಡಿಸಿದರು.

ಇವರ ಮಾತಿಗೆ ಧ್ವನಿಗೂಡಿಸಿದ ಸದಸ್ಯ ನವೀನ್, ಹೆಚ್ಚಿನ ದರಕ್ಕೆ ಬಿಡ್ ಮಾಡಿ, ಬಾಡಿಗೆ ಕಟ್ಟಲಾಗದೇ ಕೋರ್ಟ್ ಮೆಟ್ಟಿಲೇರುವ ಬಾಡಿಗೆದಾರರ ವಿರುದ್ಧ ಪುರಸಭೆ ನೇಮಿಸಿದ ವಕೀಲರು ಸಮರ್ಪಕವಾಗಿ ವಾದ ಮಾಡುತ್ತಿಲ್ಲ. ಇನ್ನೂ ನಾವು ಅವರಿಂದ ಬಾಡಿಗೆ ವಸೂಲಿ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಸದಸ್ಯ ಜಿ.ಆರ್.ಸುರೇಶ್ ಮಾತನಾಡಿ, ಹೈಕೋರ್ಟ್ ಕಟ್ಟುನಿಟ್ಟಾಗಿ ಬಾಡಿಗೆ ವಸೂಲಿಗೆ ನೋಟಿಸ್ ಕೊಟ್ಟು ವರ್ಷ ಕಳೆದರೂ ಕ್ರಮಕ್ಕೆ ಮುಂದಾಗಿಲ್ಲವೆಂದು ಆರೋಪಿಸಿದರು. ಇನ್ನೂ ಪಟ್ಟಣವನ್ನು ಪ್ಪಾಸ್ಟಿಕ್ ಮುಕ್ತ, ್ಲೇಕ್ಸ್ ಮುಕ್ತವಾಗಿಸಬೇಕು. ಈ ನಿಟ್ಟಿನಲ್ಲಿ ಹೊಸ ಅಧ್ಯಕ್ಷರು ಕಾರ್ಯಪ್ರವೃತ್ತರಾಗಬೇಕು ಎಂದು ಸದಸ್ಯರು ಆಗ್ರಹ ಮಾಡಿದರು.

ಆರೋಪಗಳಿಗೆ ಉತ್ತರಿಸಿದ ಶಾಸಕರು, ಮಳಿಗೆಯ ಕುರಿತಾಗಿ ಸಮರ್ಪಕ ಮಾಹಿತಿಯೊಂದಿಗೆ ಮುಂದಿನ ಬುಧವಾರ ಪ್ರತ್ಯೇಕ ಸಭೆ ನಿಗದಿಗೊಳಿಸಲಾಗಿದೆ. ಸಭೆಗೆ ನಾನು ಹಾಜರಿರುತ್ತೇನೆ. ಮಳಿಗೆಗಳ ಸಂಖ್ಯೆ, ಕೋರ್ಟ್ ಮೆಟ್ಟಿಲೇರಿರುವ ಮಳಿಗೆಗಳ ಸಂಖ್ಯೆ, ಕಾರಣ, ತಿಂಗಳಿಗೆ ವಸೂಲಿಯಾಗಬೇಕಾಗಿರುವ ಬಾಡಿಗೆ, ಸದ್ಯ ವಸೂಲಿಯಾಗುತ್ತಿರುವುದು, ಬಾಕಿಯಿರುವುದು ಎಲ್ಲದರ ಸಮರ್ಪಕ ಉತ್ತರವನ್ನು ಅಕಾರಿಗಳು ಆ ಸಭೆಯಲ್ಲಿ ನೀಡಬೇಕೆಂದರು.

ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ : ಪುರಸಭೆಯ ಮೊದಲ ಸಾಮಾನ್ಯ ಸಭೆಯಲ್ಲಿಯೇ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ವಾರ್ಡ್ ನಂ. 21ರ ಸದಸ್ಯ ಸಿ.ಆರ್.ಸುರೇಶ್ ಅವರನ್ನು ಆಯ್ಕೆ ಮಾಡಲಾಯಿತು. ಸಿ.ಆರ್.ಸುರೇಶ್ ಅವರ ಹೆಸರನ್ನು ಸದಸ್ಯ ಮೋಹನ್ ಅವರು ಘೋಷಿಸಿದರು. ಇದಕ್ಕೆ ಎಲ್ಲ ಸದಸ್ಯರು ಅನುಮೋದಿಸಿದರು. ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್.ಸುರೇಶ್ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಸೇರಿ ಎಲ್ಲ ಸದಸ್ಯರು ಅಭಿನಂದಿಸಿದರು. ಪಟ್ಟಣ ಅಭಿವೃದ್ಧಿಗೆ ಅಧ್ಯಕ್ಷರು, ಉಪಾಧ್ಯಕ್ಷರೊಂದಿಗೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರು ಕೈಜೋಡಿಸಿ ಸಹಕರಿಸಲಿ ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ರಾಣಿಕೃಷ್ಣ, ಪುರಸಭಾ ಮುಖ್ಯಾಕಾರಿ ಹೇಮಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net