

ಶಿವಮೊಗ್ಗ: ಮಹನಾಗರ ಪಾಲಿಕೆಯಲ್ಲಿ ಸದಸ್ಯರ ಅವಧಿ ಮುಗಿದು ನಾಲ್ಕು ತಿಂಗಳು ಕಳೆದಿದ್ದು ತ್ವರಿತವಾಗಿ ಚುನಾವಣೆ ನಡೆಸಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದರು.
ಪಾಲಿಕೆಗೆ ಚುನಾವಣೆ ನಡೆಯಬೇಕಿದ್ದು ಅಧಿಕಾರ ಇಲ್ಲದೆ ಕಸ ವಿಲೇವಾರಿಯೂ ಸಮರ್ಪಕವಾಗಿ ಆಗುತ್ತಿಲ್ಲ. ಕಂಟೇನರ್‌ಗಳನ್ನು ನಿಲ್ಲಿಸಲಾಗಿದೆ. ಆಟೋ ಟಿಪ್ಪರ್‌ಗಳಲ್ಲಿ ದೊಡ್ಡಮಟ್ಟದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಇದರ ಪರಿಣಾಮ ಸೊಳ್ಳೆ ಕಾಟ ಹೆಚ್ಚಾಗಿದೆ. ನಾನಾ ಸಮಸ್ಯೆಗಳು ಉದ್ಬವವಾಗುತ್ತಿದ್ದು ಹಾಗಾಗಿ ಪಾಲಿಕೆ ಚುನಾವಣೆಯನ್ನು ತ್ವರಿತವಾಗಿ ಮಾಡುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಜತೆಗೆ ಪಾಲಿಕೆಗೆ ಮಲವಗೊಪ್ಪ, ಗಾಡಿಕೊಪ್ಪ, ಬೊಮ್ಮನಕಟ್ಟೆ, ನವುಲೆ, ಮಲ್ಲಿಗೆನಹಳ್ಳಿ ವಡ್ಡಿನಕೊಪ್ಪ ಸೇರಿ ಹಲವು ಗ್ರಾಮಗಳನ್ನು ಸೇರ್ಪಡೆ ಮಾಡಿಕೊಂಡು 20 ವರ್ಷವಾದರೂ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಈ ನಡುವೆ ಸೋಗಾನೆ, ಗೋವಿಂದಾಪುರ, ಅನುಪಿನಕಟ್ಟೆ ಗ್ರಾಪಂಗಳನ್ನು ಸೇರಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಆಯುಕ್ತರಿಗೆ ಪತ್ರ ಬರೆದಿದ್ದಾರೆ. 20 ವರ್ಷದ ಹಿಂದೆ ಸೇರಿಸಿದ ವ್ಯಾಪ್ತಿ ವಿಸ್ತರಣೆ ಆಗಬೇಕಿದ್ದು ಮೊದಲು ಸೇರ್ಪಡೆ ಆಗಿರುವ ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.