

ಕವಲೂರು: ದೇಶಪ್ರೇಮವನ್ನು ಸಾರುವ ರಾಷ್ಟ್ರಧ್ವಜವನ್ನು ತೇರಿನ ಮೇಲೆ ಹಾರಿಸಿ ಭಾವೈಕ್ಯ ಸಾರುತ್ತಿರುವ ಕವಲೂರು ಗ್ರಾಮದ ಕಾರ್ಯ ಶ್ಲಾಘನೀಯ ಎಂದು ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಕವಲೂರು ಗ್ರಾಮದಲ್ಲಿ ಶ್ರೀ ದುರ್ಗಾದೇವಿ, ಶ್ರೀ ಪಾರ್ವತಿ ಪರಮೇಶ್ವರ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಸೋಮವಾರ ಮಾತನಾಡಿದರು.
ದಂಪತಿ ಸಪ್ತ ಪದಿ ತುಳಿಯುವ ಮೂಲಕ ಸಾರ್ಥಕ ಬದುಕಿಗೆ ಹೆಜ್ಜೆ ಇಡಬೇಕು ಎಂದರು. ಕುಕನೂರು ಡಾ.ಮಹಾದೇವ ಸ್ವಾಮೀಜಿ ಮಾತನಾಡಿ, ಈ ಜಗತ್ತಿನಲ್ಲಿ ಯಾರು ಕಾಯಕ ತತ್ವವನ್ನು ಅಳವಡಿಸಿಕೊಳ್ಳುತ್ತಾರೋ ಅವರು ದೊಡ್ಡವರಾಗುತ್ತಾರೆ. ಈ ನಿಟ್ಟಿನಲ್ಲಿ ಬಸವಣ್ಣ ಕಾಯಕದ ಮೂಲಕವೇ ದೊಡ್ಡವರಾಗಿದ್ದಾರೆ. ಹಾಗೂ ಮನೆ ಬೆಳಗಲು ಮಹಿಳೆಯ ಪಾತ್ರ ಅವಶ್ಯ. ಹೀಗಾಗಿ ಊರು ಬೆಳಗಲು ಈ ಗ್ರಾಮದಲ್ಲಿ ಸಂಸ್ಕಾರಯುತ ಜನರಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ಹೀಗೆ ಅನೇಕರ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಸಾಮೂಹಿಕ ಮದುವೆಯಿಂದ ಬಡವರಿಗೆ ಆರ್ಥಿಕ ಹೊರೆ ತಪ್ಪಲಿದೆ. ದಂಪತಿ ಜೀವನದಲ್ಲಿ ಕಾಯಕ ತತ್ವವನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ದುಡಿದು ಸ್ವಾವಲಂಬಿಗಳಾದಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದರು.
ಪ್ರಮುಖರಾದ ವೈ.ಎನ್.ಗೌಡರ, ಭರಮಪ್ಪ ನಗರ, ಹೊನ್ನಪ್ಪಗೌಡ, ತೋಟಪ್ಪ, ಗವಿಸಿದ್ದಯ್ಯ, ಮಲ್ಲಮ್ಮ, ಅನ್ನಪೂರ್ಣ, ಸೈಯದ್, ಗುರುಮೂರ್ತಿ ಸ್ವಾಮಿ, ಭೀಮೇಶಪ್ಪ, ನೀಲಪ್ಪ, ಬಸಮ್ಮ, ಅನಿತಾ, ಸಣ್ಣ ಜಂಬಣ್ಣ, ಶ್ರೀ ದುರ್ಗಾದೇವಿ ಸಂಘದ ಸದಸ್ಯರಿದ್ದರು.