

ಮೈಸೂರು: ರಾಜ, ಮಹಾರಾಜರು ಸಮಾಜ ಸೇವೆ ಮೂಲಕವೇ ವಿಶ್ವಕ್ಕೆ ಪರಿಚಿತರಾದವರು. ಅಂತಹ ಪರಂಪರೆಯನ್ನು ಲಯನ್ಸ್‌ನಂತಹ ಸಂಘ, ಸಂಸ್ಥೆಗಳು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವೆುಚ್ಚುಗೆ ವ್ಯಕ್ತಪಡಿಸಿದರು.
ತಿಲಕ್ ನಗರದಲ್ಲಿರುವ ಲಯನ್ಸ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಯನ್ಸ್ ಕ್ಲಬ್ ಆಫ್ ಮೈಸೂರು 317-ಜಿ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೈಸೂರಿಗೆ ತನ್ನದೇ ಆದ ಪರಂಪರೆ ಇದೆ. ಅದು ಮುಂದುವರಿಯಬೇಕು. ಅಭಿವೃದ್ಧಿ ಕಾರ್ಯಗಳು ಬೇಕೇಬೇಕು. ಅದರೊಂದಿಗೆ ನಮ್ಮ ಸಂಸ್ಕೃತಿ, ಪರಂಪರೆ ಉಳಿವು, ಪಾರಂಪರಿಕ ಕಟ್ಟಡಗಳ ರಕ್ಷಿಸುವ ಕೆಲಸವೂ ಆಗಬೇಕು. ಈ ನಿಟ್ಟಿನಲ್ಲಿ ಸಂಸದನಾಗಿ ನಾನು ಮೈಸೂರು ಹಾಗೂ ಕೊಡಗಿನ ಮೂಲ ಸ್ವರೂಪ ಉಳಿಸಿಕೊಂಡು ಅಭಿವೃದ್ಧಿ ಪಡಿಸುವೆ ಎಂದು ಭರವಸೆ ನೀಡಿದರು.
ನಗರದಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಜನರು ಕಸವನ್ನು ಎಲ್ಲೆಂದರಲ್ಲಿ ಹಾಕುವುದನ್ನು ನಿಲ್ಲಿಸಬೇಕು. ನಮ್ಮ ಮನೆ, ನಗರ ಸ್ವಚ್ಚವಾದಲ್ಲಿ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ನೀವು ಕಾರ್ಯಕ್ರಮ ರೂಪಿಸಿ. ನಾನು ನಿಮ್ಮ ಜೊತೆಗಿರುತ್ತೇನೆ ಎಂದು ಯದುವೀರ್ ಕೋರಿದರು. ಸಂಸ್ಥೆ ಅಧ್ಯಕ್ಷ ಬಿ.ಶಿವಣ್ಣ ಮತ್ತು ಪದಾಧಿಕಾರಿಗಳ ತಂಡಕ್ಕೆ ಕೆ.ಎಲ್.ರಾಜಶೇಖರ ಪ್ರಮಾಣ ವಚನ ಬೋಧಿಸಿದರು. ಡಾ.ಎನ್.ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಘಟಕ ಅಧ್ಯಕ್ಷೆ ಬಿ.ಭಾರತಿ, ಕೆ.ದೇವೇಗೌಡ, ಕೆ.ಎಲ್.ರಾಜಶೇಖರ, ಬಿ.ಎಲ್.ಗಿರೀಶ್, ಶಿವಕುಮಾರ್, ಜೆ.ಲೋಕೇಶ್, ಕೆ.ಆನಂದಕೃಷ್ಣ, ಎಚ್.ಬಿ.ಸುರೇಶ್ ಇದ್ದರು.