

ಕಬ್ಬೂರು: ಪ್ರಸ್ತುತ ದಿನಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ಯುಗ ಆರಂಭವಾಗುತ್ತಿದ್ದು, ಪ್ರತಿ ಕ್ಷೇತ್ರದಲ್ಲೂ ವಿಜ್ಞಾನ ಹಾಗೂ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಸಹಾಯಕ ಪ್ರಾಧ್ಯಾಪಕ ಡಾ.ಜಯಣ್ಣ ಎನ್.ಡಿ ಸಲಹೆ ನೀಡಿದರು.
ಪಟ್ಟಣದ ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆ ಆಶ್ರಯದಲ್ಲಿ ಓಂ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗಣಿತ ಹಾಗೂ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಡಾ.ಮಹೇಂದ್ರ ಕೆ.ಆರ್ ಗಣಿತ ಹಾಗೂ ವಿಜ್ಞಾನ ವಿಷಯದ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ನೂರಕ್ಕೂ ಹೆಚ್ಚು ವಿವಿಧ ಬಗೆಯ ವಿಜ್ಞಾನ ಹಾಗೂ ಗಣಿತದ ಮಾದರಿ ತಯಾರಿಸಿ ಅವುಗಳ ಬಗೆಗೆ ವಿವರಿಸಿದರು. ಉಪ ಪ್ರಾಚಾರ್ಯ ರಾಜು ಮಹಿಪತಿ, ಶಿಕ್ಷಕರಾದ ಪ್ರವೀಣ ಪಾಟೀಲ, ಶ್ರೀಧರ ಮಾನೆ, ಪ್ರಿಯಾಂಕಾ ಇಂಚಲ್, ರೇಖಾ ಮಾಳಿ ಹಾಗೂ ಇತರರಿದ್ದರು