

ಬೆಳಗಾವಿ: ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ವಿವಿಧ ಇಲಾಖೆಯ ಯೋಜನೆಗಳು ಅರ್ಹರಿಗೆ ತಲುಪಬೇಕು. ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜತೆಗೆ ಕಾಲಮಿತಿಯೊಳಗೆ ನಿಗದಿತ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಸದಲಗಾದಲ್ಲಿನ ಮೌಲಾನಾ ಆಝಾದ್ ಶಾಲೆಯಲ್ಲಿ ಶೌಚಗೃಹಗಳು ಇಲ್ಲದ ಬಗ್ಗೆ ದೂರುಗಳು ಬಂದಿವೆ. ಶೌಚಗೃಹ ನಿರ್ಮಾಣಕ್ಕೆ ಕೂಡಲೇ ಕ್ರಮ ವಹಿಸಬೇಕು ಎಂದರು.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಂತಹ ಉರ್ದು ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಹಾಗೂ ಅಂತಹ ಶಾಲೆಗಳನ್ನು ಮೌಲಾನಾ ಆಝಾದ ಶಾಲೆಗಳಾಗಿ ಪರಿವರ್ತಿಸಲು ಕ್ರಮ ವಹಿಸಬೇಕು. ವಿದ್ಯಾರ್ಥಿನಿಯರ ಸುರಕ್ಷತೆ ನಿಟ್ಟಿನಲ್ಲಿ ‘ಶೀಬಾಕ್ಸ್’ ಪೋರ್ಟಲ್ ಪ್ರಾರಂಭವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಪೋರ್ಟಲ್ ಎಲ್ಲ ಇಲಾಖೆಯ ವಸತಿ ಶಾಲೆಗಳಿಗೂ ಅನ್ವಯವಾಗಲಿದೆ. ಶೀಬಾಕ್ಸ್ ಪೋರ್ಟಲ್ನಲ್ಲಿ ದಾಖಲಾಗುವ ದೂರುಗಳ ಕುರಿತು ನಿಯಮಿತವಾಗಿ ಟ್ರ್ಯಾಕ್ ಮಾಡಲು ತಿಳಿಸಿದರು.
ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಕುಂಠಿತವಾಗಿದಂತೆ ಗಮನ ಹರಿಸಬೇಕು. ಫಲಾನುಭವಿಗಳಿಗೆ ನೀಡಲಾಗುವ ಸಾಲ ಯೋಜನೆಗಳ ಕುರಿತು ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಿ ಸಾಲ ಮಂಜೂರಾತಿಗೆ ಲೀಡ್ ಬ್ಯಾಂಕ್ ಅಧಿಕಾರಿಗಳು ಕ್ರಮವಹಿಸಬೇಕು. ಒಂದು ವೇಳೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ ಬ್ಯಾಂಕ್ ಅಧಿಕಾರಿಗಳು ಸೂಕ್ತ ಕಾರಣ ನೀಡಬೇಕು ಎಂದರು.
ಶಾಸಕ ಆಸೀಫ್ ಸೇಠ್ ಮಾತನಾಡಿ, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಮರ್ಪಕವಾಗಿ ಪೂರೈಸಬೇಕು. ತೋಟಗಾರಿಕೆ ಇಲಾಖೆಯಿಂದ ಜಾರಿಯಲ್ಲಿರುವ ಯೋಜನೆಗಳ ಕುರಿತು ಮುಸ್ಲಿಂ, ಜೈನ ಸೇರಿ ಎಲ್ಲ ಅಲ್ಪಸಂಖ್ಯಾತ ವರ್ಗದ ರೈತರಲ್ಲಿ ಜಾಗೃತಿ ಮೂಡಿಸಿ ಯೋಜನೆಗಳ ಸದುಪಯೋಗ ಪಡೆಯುವಂತಾಗಬೇಕು ಎಂದರು.
ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಖಾನಾಪುರದಲ್ಲಿನ ಮೌಲಾನಾ ಆಝಾದ್ ಶಾಲೆಯ ಒಂದೇ ಆವರಣದಲ್ಲಿ ಇತರ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಮೌಲಾನಾ ಆಝಾದ್ ಶಾಲೆಗೆ ಮೈದಾನ ಸಮೇತ ಪ್ರತ್ಯೇಕವಾಗಿ ಕನಿಷ್ಠ ಒಂದು ಎಕರೆ ಜಾಗ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಶಾಸಕರು ಸೂಕ್ತ ಜಾಗ ಗುರುತಿಸಿದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಅಲ್ಪಸಂಖ್ಯಾತರ ಇಲಾಖೆ ಕಲ್ಯಾಣಾಧಿಕಾರಿ ಅಬ್ದುಲ್ ರಶೀದ್ ಮಿರ್ಜನ್ನವರ ಸಭೆ ನಿರ್ವಹಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಜಿಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ, ಮಹಾಂತೇಶ ಮುರಗೋಡ, ಶಿವಪ್ರಿಯಾ ಕಡೆಚೂರು, ಡಾ. ರಾಜೀವ್ ಕೂಲೇರ, ಆರ್. ನಾಗರಾಜ ಇತರರಿದ್ದರು.