

ಬಾಗಲಕೋಟೆ: ಪ್ರಸಕ್ತ ಸಾಲಿನ ಎಸ್‌ಸಿಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಸರ್ಕಾರ ತುಳಿತಕ್ಕೆ ಒಳಗಾದ ಜನರಿಗೆ ಅನ್ಯಾಯ ಮಾಡಿದೆ. ಇದನ್ನು ವಿರೋಧಿಸಿ ಎಸ್ಸಿ, ಎಸ್ಟಿ ಜನರು ಹಾಗೂ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆಗೆ ಮುಂದಾಗುವಂತೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರದ ಆಡಳಿತ ಗಬ್ಬು ನಾರುತ್ತಿದೆ. ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಶಕ್ತಿ ಯೋಜನೆಗೆ ದುರ್ಬಳಕೆ ಮಾಡಿಕೊಂಡಿದೆ. ಇದನ್ನು ಖಂಡಿಸಿ ಎಸ್‌ಸಿ, ಎಸ್ಟಿ ಜನರು ಪ್ರತಿಭಟನೆಗೆ ಮುಂದಾಗುವಂತೆ ಅವರು ತಿಳಿಸಿದರು.
ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ವರ್ಗಾವಣೆಗೆ ಲಂಚ ಕೇಳುತ್ತಿದ್ದಾರೆಂದು ಅಧಿಕಾರಿಗಳು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ತಕ್ಷಣವೇ ಸಿದ್ದರಾಮಯ್ಯ ಸರ್ಕಾರ ರಾಜೀನಾಮೆ ಕೊಟ್ಟು ತನಿಖೆಗೆ ಆದೇಶ ನೀಡಬೇಕು. ತನಿಖೆಯಲ್ಲಿ ನಿರ್ದೋಷಿ ಎಂದಾದರೆ ಮತ್ತೆ ಅಧಿಕಾರ ಪಡೆಯಲಿ ಎಂದರು.
ಸಿದ್ದರಾಮಯ್ಯ, ಡಿಕೆಶಿ ಮನೆ ಮೂಲೆಯಲ್ಲಿ ಇದ್ದ ಆ ಕೆಂಪಣ್ಣ ಇದೀಗ ಹೊರಗೆ ಬಂದಿದ್ದಾನೆ. ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೇವೆ ಎಂದಿದ್ದಾರೆ. ಆದರೆ, ನಮ್ಮ ಸರ್ಕಾರದ ಮೇಲೆ ಯಾವುದೇ ಆಧಾರ ಇಲ್ಲದೆ ಸುಳ್ಳು ಆರೋಪ ಮಾಡಿದ್ದ ಕೆಂಪಣ್ಣ ಈಗ ಪಶ್ಚಾತ್ತಾಪದ ಮಾತು ಹೇಳುತ್ತಿದ್ದಾರೆ. ಆದರೆ, ಕೆಂಪಣ್ಣ ಗುತ್ತಿಗೆ ಕೆಲಸ ಬಿಟ್ಟು 20 ವರ್ಷ ಆಗಿರಬೇಕು. ಸುಮ್ಮನೆ ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿದ್ದರು. ಇದೀಗ ಸ್ವತಃ ಕೆಲಸ ಮಾಡಿದ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ನೈತಿಕತೆ ಇದ್ದರೆ ಸಿದ್ದರಾಮಯ್ಯ ಮೊದಲು ರಾಜೀನಾಮೆ ಕೊಟ್ಟು ತೆರಳಬೇಕು. ನಮ್ಮ ಸರ್ಕಾರದ ವಿರುದ್ಧ ಗುತ್ತಿಗೆ ಕೆಲಸ ಮಾಡಿದ್ದ ಯಾರೊಬ್ಬರೂ ಆರೋಪ ಮಾಡಿರಲಿಲ್ಲ. ಆದರೂ ಮಾಧ್ಯಮಗಳು ಅದನ್ನು ದೊಡ್ಡದಾಗಿ ಬಿಂಬಿಸಿದವು. ಇದೀಗ ಲಂಚದ ಬಗ್ಗೆ ಸತ್ಯ ಹೇಳುತ್ತಿದ್ದಾರೆ. ಅಜ್ಜಯ್ಯನ ಮೇಲೆ ಆಣೆ ಮಾಡಲು ಸಿದ್ಧರಾಗಿದ್ದಾರೆ. ಇದರಿಂದ ಸಿದ್ದರಾಮಯ್ಯ ಲೋಕಾಯುಕ್ತಕ್ಕೆ ಈ ಪ್ರಕರಣವನ್ನು ಒಪ್ಪಿಸಿ ರಾಜೀನಾಮೆ ನೀಡುವಂತೆ ಕಾರಜೋಳ ಆಗ್ರಹಿಸಿದರು.
ಈ ಹಿಂದೆ ಸಿಡಿ ಪ್ರಕರಣಗಳಲ್ಲಿ ಸಚಿವರು ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಿದ್ದರು. ಆದರೆ, ಸ್ವಾತಂತ್ರೃದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರದ ಸಚಿವರು ತಮ್ಮ ಭ್ರಷ್ಟಾಚಾರದ ವಿರುದ್ಧ ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಿದ್ದಾರೆ. ಇದು ಸರಿಯಲ್ಲ. ಆರೋಪಗಳು ಬಂದಾಗ ಅದನ್ನು ಸ್ವಾಗತಿಸಿ ತನಿಖೆ ಎದುರಿಸಬೇಕು ಎಂದು ಕಾರಜೋಳ ಒತ್ತಾಯಿಸಿದರು. ಮಾಜಿ ಶಾಸಕ ವೀರಣ್ಣ ಚರಂತಿಮಠ ಉಪಸ್ಥಿತರಿದ್ದರು.
ಇನ್ನು ಜಲಸಂಪನ್ಮೂಲ ಇಲಾಖೆಯಲ್ಲಿ 25 ಸಾವಿರ ಕೋಟಿ ರೂ. ಯೋಜನೆಗಳಿಗೆ ದುಡ್ಡು ಇಲ್ಲದೆ ಚಾಲನೆ ನೀಡಿ ಹೋಗಿದ್ದಾರೆ ಎನ್ನುವ ಕಾಂಗ್ರೆಸ್ಸಿಗರ ಆರೋಪಕ್ಕೆ ತಿರುಗೇಟು ನೀಡಿರುವ ಇಲಾಖೆಯ ಮಾಜಿ ಸಚಿವ ಕಾರಜೋಳ, 2018ರಲ್ಲಿ ಮನೆಗೆ ಹೋಗುವಾಗ 15 ಸಾವಿರ ಕೋಟಿ ರೂ. ಕಾಮಗಾರಿಗಳಿಗೆ ಟೆಂಡರ್ ಕರೆದು ಹೋಗಿದ್ದೀರಲ್ಲ ಆಗ ಖಜಾನೆಯಲ್ಲಿ ದುಡ್ಡು ಇಟ್ಟು ಹೋಗಿದ್ರಾ? ಮತ್ತೆ ಕಮಿಷನ್ ಯಾರಿಗೆ ಹೋಯಿತು? ಎಂದು ಪ್ರಶ್ನಿಸಿದರು.