

ಮುಂಡರಗಿ: ಸಂಸ್ಕೃತ ಕಲಿಕೆಯಿಂದ ಎಲ್ಲ ಭಾಷೆಯಲ್ಲಿ ಪ್ರಭುತ್ವ ಬೆಳೆಯುತ್ತದೆ, ಭಾಷಾ ಶುದ್ಧಿ ಉಂಟಾಗುತ್ತದೆ. ಮಕ್ಕಳು ಸಂಸ್ಕೃತವನ್ನು ಅಭ್ಯಾಸ ಮಾಡಬೇಕು. ಪ್ರತಿಯೊಬ್ಬರೂ ಸಂಸ್ಕೃತವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಸಂಸ್ಕೃತೋತ್ಸವ ಕಾರ್ಯಕ್ರಮ ನಿಮಿತ್ತ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ, ಜಗದ್ಗುರು ಅನ್ನದಾನೀಶ್ವರ ಸಂಸ್ಕೃತ ಪಾಠಶಾಲೆ ಆಶ್ರಯದಲ್ಲಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವ ಜಾಥಾಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಶ್ರೀಮಠದಲ್ಲಿ 1912ರಲ್ಲಿಯೇ ಸಂಸ್ಕೃತ ಪಾಠ ಶಾಲೆ ಆರಂಭಿಸಲಾಗಿದೆ. ಸಂಸ್ಕೃತ ಭಾಷೆಯನ್ನು ಮನೆಮನೆಗೆ ಮುಟ್ಟಿಸುವ ಕೆಲಸ ಆಗಬೇಕಿದೆ ಎಂದರು.
ಧಾರವಾಡ ವಲಯ ಸಂಸ್ಕೃತ ಪಾಠಶಾಲೆಯ ವಿಷಯ ಪರಿವೀಕ್ಷಕ ಜಿ.ಎಸ್. ಗಾಂವಕರ ಮಾತನಾಡಿ, ಎಲ್ಲ ಭಾಷೆಯ ವಿಜ್ಞಾನಿಗಳು ಸಂಸ್ಕೃತವನ್ನು ಒಪ್ಪಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ನಾಸಾದಲ್ಲಿ ಸಂಸ್ಕೃತಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಸ್ಕೃತ ಭಾಷೆಯನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡಬೇಕು. ರಾಜ್ಯದಲ್ಲಿ ಸಂಸ್ಕೃತ ಜೀವಂತವಾಗಿರಲು ಮಠಮಾನ್ಯಗಳ ಪಾತ್ರ ದೊಡ್ಡದಿದೆ. ಸಂಸ್ಕೃತ ಜ್ಞಾನ ಭಂಡಾರವನ್ನು ಸಂರಕ್ಷಣೆ ಮಾಡಿ ಮುಂದಿನ ಪರಂಪರೆಗೆ ವರ್ಗಾಯಿಸುವ ಕೆಲಸವಾಗಬೇಕಿದೆ ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಸ್ಕೃತೋತ್ಸವ ಜಾಥಾ ಸಂಚರಿಸಿ ಮರಳಿ ಶ್ರೀಮಠ ತಲುಪಿತು. ನಂತರ ಶ್ರೀಮಠದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಅಧ್ಯಕ್ಷತೆ ವಹಿಸಿದ್ದರು. ಇಲ್ಲಿನ ಸಂಸ್ಕೃತ ಪಾಠಶಾಲೆಯ ನಿವೃತ್ತ ಮುಖ್ಯಶಿಕ್ಷಕ ಸಿ.ಕೆ. ಹಿರೇಮಠ ಉಪನ್ಯಾಸ ನೀಡಿದರು. ಸಂಸ್ಕೃತ ಪಾಠಶಾಲೆ ಮುಖ್ಯಶಿಕ್ಷಕಿ ಎಸ್.ಬಿ. ಹಿರೇಮಠ, ಸಂಸ್ಕೃತ ಸಹಶಿಕ್ಷಕ ಹಾಲಯ್ಯ ಹಿರೇಮಠ, ಜಯಣ್ಣ ಗುಜ್ಜರ, ವೆಂಕಟೇಶ ದಾಸಕನಕಪ್ಪನವರ, ರಾಜಶೇಖರ ಕಡಿವಾಳರ, ಕೊಟ್ರಯ್ಯ ಹಿರೇಮಠ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇತರರಿದ್ದರು.