

ಬೇತಮಂಗಲ: ದೇವರ ದರ್ಶನ ಪಡೆಯಲು ಬರುವ ಭಕ್ತರ ನಂಬಿಕೆ ಉಳಿಸಬೇಕಾದರೆ, ಮೊದಲು ದೇವಾಲಯದ ಪಾವಿತ್ರ್ಯತೆ ಕಾಪಾಡಬೇಕು ಮತ್ತು ಮೂಲ ಸೌಲಭ್ಯಗಳನ್ನು ಆಡಳಿತ ಮಂಡಳಿ ಕಲ್ಪಿಸಬೇಕು ಎಂದು ಶಾಸಕಿ ರೂಪಕಲಾ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಬಂಗಾರು ತಿರುಪತಿ ದೇವಾಲಯ ಆವರಣದಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸ ಕಟ್ಟಡವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಂಗಾರು ತಿರುಪತಿ ದೇವಾಲಯ ಇರುವುದು ನಮ್ಮ ಪುಣ್ಯ. ಸಾಕಷ್ಟು ಪುರಾಣ ಪ್ರಸಿದ್ಧ ಹಾಗೂ ಲಕ್ಷಾಂತರ ಭಕ್ತರ ಆರಾಧ್ಯ ದೈವ ಆಗಿರುವ ವೆಂಕಟರಮಣ ಸ್ವಾಮಿ ದೇವರನ್ನು ನೋಡಲು ಬಡವರೇ ಹೆಚ್ಚಾಗಿ ಬರುತ್ತಾರೆ. ತಿರುಪತಿ ದೇವರ ದರ್ಶನಕ್ಕೆ ಹೋಗಲು ಸಾಧ್ಯವಾಗದೆ ಇರುವವರು ಇಲ್ಲಿಗೆ ಬರುತ್ತಾರೆ ಎಂದರು.
ಭಕ್ತರಿಗೆ ವಸತಿ ಸೌಲಭ್ಯ ಇಲ್ಲ. ಮಹಿಳೆಯುರ, ಮಕ್ಕಳು ಸ್ನಾನ ಮಾಡಿದೆರ ಕನಿಷ್ಠ ಬಟ್ಟೆ ಬದಲಾಯಿಸಲು ಸ್ಥಳ ಇಲ್ಲ ಎನ್ನುವುದು ಗಮನಕ್ಕೆ ಬಂದಿದ್ದು, ಯಾತ್ರಿ ನಿವಾಸ ಪ್ರಾಂರಭ ಮಾಡಲು ಇದ್ದ ಹಲವು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ತೆಗೆದುಕೊಂಡು ಇದೀಗ ಉದ್ಘಾಟನೆ ಮಾಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಬೆಟ್ಟದ ಮೇಲೆ ಹೋಗಲು ರೋಪ್ ವೇ ಮತ್ತು ಲಿಫ್ಟ್ ಅಳವಡಿಸಲು ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಮೂಲಕ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಣೆ ಮಾಡುವಂತಹ ಯೋಜನೆ ರೂಪಿಸಲಾಗುತ್ತಿದೆ ಎಂದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶೋಕ್ ಕೃಷ್ಣಪ್ಪ ಮಾತನಾಡಿ, ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಆವರಣದಲ್ಲಿರುವ ಎಲ್ಲ ಗೋಪುರಗಳ ಬಣ್ಣ ಹಚ್ಚಿ ಸುಂದರವಾಗಿ ಮಾಡಲಾಗಿದೆ. ಇದೀಗ ಯಾತ್ರಿ ನಿವಾಸ ವಸತಿ ಗೃಹಗಳನ್ನು ಉದ್ಘಾಟನೆಯಾಗಿದ್ದು, ಭಕ್ತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಮಾಜಿ ಅಧ್ಯಕ್ಷ ಪ್ರಸನ್ನ, ವೆಂಕಟಾರಮ್, ಜಿಪಂ ಮಾಜಿ ಸದಸ್ಯ ಆಮು ಲಕ್ಷ್ಮೀ ನಾರಾಯಣ, ಬೇತಮಂಗಲ ಗ್ರಾಪಂ ಅಧ್ಯಕ್ಷ ವಿನು ಕಾರ್ತಿಕ್, ಸದಸ್ಯರಾದ ಸುರೇಂದ್ರ ಗೌಡ, ಶಂಕರ್, ತಾಪಂ ಮಾಜಿ ಅಧ್ಯಕ್ಷ ಶಂಕರಪ್ಪ ಇದ್ದರು.