

ಮೇಲುಕೋಟೆ : ಗ್ರಾಮೀಣ ಕ್ರೀಡಾಪ್ರತಿಭೆಗಳು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವಂತಾಗಬೇಕು ಎಂದು ರೈತ ಸಂಘದ ವರಿಷ್ಠ ನಾಯಕಿ ಸುನೀತಾ ಪುಟ್ಟಣ್ಣಯ್ಯ ಆಶಿಸಿದರು.
ಹೋಬಳಿಯ ಅಮೃತಿ ಗ್ರಾಮದಲ್ಲಿ ಆಯೋಜಿಸಿದ್ದ ಮೇಲುಕೋಟೆ ವೃತ್ತಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಸ್ವೀಕರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಶಿಕ್ಷಣದ ಜತೆಗೆ ಕ್ರೀಡೆಯು ಮುಖ್ಯವಾದ ಅಂಗ. ಪ್ರತಿಶಾಲೆಯಲ್ಲೂ ವಿದ್ಯಾರ್ಥಿಗಳನ್ನು ಕನಿಷ್ಠ ಒಂದು ಅವಧಿ ಕ್ರೀಡಾಚಟುವಟಿಕೆಯಲ್ಲಿ ತೊಡಗಿಸಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಅಗತ್ಯ. ಗೆಲ್ಲುವ ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಂಡರೆ ಖಂಡಿತ ಜಯ ಸಿಗುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದ್ದು, ಕ್ರೀಡಾಸಕ್ತಿ ಇರುವ ಮಕ್ಕಳನ್ನು ಪಾಲಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ತಾಲೂಕಿನ ಕ್ರೀಡಾಚಟುವಟಿಕೆಗಳ ಉತ್ತೇಜನಕ್ಕೆ ವಿಶೇಷ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತದೆ. ಅಮೃತಿ ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಶಾಲೆಗೆ ಸಹಕಾರಿಯಾಗಿ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿ ಯಶಸ್ವಿಯಾಗಿ ಕ್ರೀಡಾಕೂಟ ಆಯೋಜಿಸಿದ್ದಾರೆ. ಇದಕ್ಕಾಗಿ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್ ತ್ಯಾಗರಾಜು ಮಾತನಾಡಿ, ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಕಲಿಕೆಯಲ್ಲಿ ಸಾಧನೆ ಸಾಧ್ಯ. ಸದೃಢ ದೇಹದಲ್ಲಿ ಗಟ್ಟಿ ಮನಸ್ಸಿರುತ್ತದೆ ಎಂಬ ಮಾತಿನಂತೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಮುಖ್ಯ. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವಿದೆ. ನಮ್ಮ ಗ್ರಾಮದಲ್ಲಿ ಕ್ರೀಡಾಕೂಟ ಆಯೋಜಿಸಲು ಗ್ರಾಮಸ್ಥರು ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿದರು.
ಕ್ರೀಡಾಕೂಟದಲ್ಲಿ ಭಾಗವಹಿಸುವ ಮಕ್ಕಳು ಗೆದ್ದು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಗೆದ್ದು ಗ್ರಾಮದ ಶಾಲೆಯ ಕೀರ್ತಿಯನ್ನು ಹೆಚ್ಚಿಸಲಿ ಕ್ರೀಡೆಯಲ್ಲಿ ಸಾಧನೆ ಮಾಡುವ ಮಕ್ಕಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತೇವೆ ಎಂದರು.
ಕ್ರೀಡಾಕೂಟಕ್ಕೆ ಎಚ್.ಮಂಜುನಾಥ್ ಮತ್ತು ಎಚ್.ತ್ಯಾಗರಾಜು ಊಟದ ವ್ಯವಸ್ಥೆ ಮಾಡಿದ್ದರೆ, ಶಂಕರ್ ಪದಕಗಳು, ವಿಶೇಷ ಬಹುಮಾನಗಳು ಹಾಗೂ ಟ್ರೋಫಿ ಕೊಡುಗೆ ನೀಡಿದ್ದರು. ಗ್ರಾಮದ ಗುಂಡುತೋಪನ್ನೇ ಗ್ರಾಮಸ್ಥರು ಪರಿಶ್ರಮದಿಂದ ಕ್ರೀಡಾಂಗಣವನ್ನಾಗಿ ಪರಿವರ್ತಿಸಿದ್ದರು.
ಜಿ.ಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಅಮೃತಿ ಎಸ್.ಡಿಎಂಸಿ ಅಧ್ಯಕ್ಷ ನಾಗೇಶ್, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ, ಇಸಿಒ ಶ್ರೀನಿವಾಸ್ ರವೀಂದ್ರ. ಜಕ್ಕನಹಳ್ಳಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಶಂಕರ್, ಸಮಾಜಸೇವಕ ಈರಣ್ಣ, ಪುನೀತ್ ಗ್ರಾ.ಪಂ. ಸದಸ್ಯರಾದ ಸೋಮಶೇಖರ್, ಜಯರಾಮೇಗೌಡ, ಅಮೃತಿ ಲೋಕೇಶ್, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ್ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕುಮಾರ್ ಚನ್ನೇಗೌಡ ನಟರಾಜು ಮತ್ತಿತರರು ಇದ್ದರು.