

ಸುಂಟಿಕೊಪ್ಪ: ಯಾವುದೇ ಜಾತಿ, ಜನಾಂಗದ ಆಚರಣೆಗಳು ಅವರ ಸಂಪ್ರದಾಯಗಳನ್ನು ಬಿಂಬಿಸುವಂತಿರಬೇಕು. ಮನುಷ್ಯ, ಮನುಷ್ಯರಲ್ಲಿ ಉತ್ತಮ ಸಂಬಂಧಗಳ ಜತೆಗೆ ದೇಶಭಕ್ತಿ ಹಾಗೂ ದೇಶ ಪ್ರೇಮ ಮೊಳಗಿಸಲು ಇಂಥ ಆಚರಣೆಗಳು ಕಾರಣವಾಗುತ್ತವೆ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ನಾಕೂರು ಶಿರಂಗಾಲ ಗ್ರಾಪಂ ವ್ಯಾಪ್ತಿಯ ಕಾನ್‌ಬೈಲ್ ಹಿಂದು ಮಲಯಾಳಿ ಸಮಾಜದಿಂದ 3ನೇ ವರ್ಷದ ಓಣಂ ಆಚರಣೆ ಪ್ರಯುಕ್ತ ಸ್ಥಳೀಯ ಕಾನ್‌ಬೈಲ್ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಸಮಾಜದವರು ತಮ್ಮ ಸಮಾಜದ ಸಂಘಟನೆಗಾಗಿ ಆಚಾರ, ವಿಚಾರ, ಸಂಸ್ಕೃತಿಗಳನ್ನು ಬೆಳೆಸುತ್ತ ಸಾಗುತ್ತಾರೆ. ಇದರಿಂದ ದೇಶದ ಅಭಿವೃದ್ಧಿಗೆ ಪೂರಕವಾಗುತ್ತಿದ್ದು ಪ್ರತಿ ಸಮಾಜದ ಬೆಳವಣಿಗೆ, ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದೇ ರೀತಿಯ ಒಗ್ಗಟ್ಟನ್ನು ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗಬೇಕು. ಹಬ್ಬ, ಹರಿದಿನಗಳಲ್ಲಿ ಆಯಾ ಸಮಾಜದವರು ತಮ್ಮ ಸಾಂಪ್ರದಾಯಿಕ ಉಡುಗೆ, ತೊಡುಗೆಗಳನ್ನು ಧರಿಸಿ ಆಚರಣೆಯಲ್ಲಿ ಪಾಲ್ಗೊಂಡಾಗ ಆಚರಣೆಗೆ ಮಹತ್ವ ಹೆಚ್ಚುತ್ತದೆ. ಹಬ್ಬ, ಹರಿದಿನಗಳು, ಜಾತ್ರೆಗಳು, ಸಮಾಜದ ಜನರನ್ನು ಬೆಸೆಯಲು ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಪರಸ್ಪರ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲೂ ಸಹಾಯಕವಾಗುತ್ತದೆ ಎಂದು ಹೇಳಿದರು.
ಮಾಲಯಾಳಿ ಸಮಾಜದ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯೂ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.
ನಾಕೂರು ಶಿರಂಗಾಲ ಗ್ರಾಪಂ ಅಧ್ಯಕ್ಷ ಮಂದೋಡಿ ಜಗನ್ನಾಥ್ ಮಾತನಾಡಿ, ಓಣಂ ಆಚರಣೆ ಹಿಂದು ಧರ್ಮೀಯ ಎಲ್ಲರನ್ನೂ ಒಂದೆಡೆ ಸೇರಿಸುವ ಹಾಗೂ ಸಾಮರಸ್ಯ ಉಂಟು ಮಾಡುವ ಆಚರಣೆಯಾಗಿದೆ. ಪಟ್ಟಣ ಪ್ರದೇಶಗಳಲ್ಲಿ ಸಮಾಜ ಅಥವಾ ಜನಾಂಗಗಳು ಈ ರೀತಿಯ ಒಗ್ಗೂಡುವಿಕೆ ಕಾಣುವುದು ಕಡಿಮೆಯಾಗಿದೆ. ಮೊಬೈಲ್ ಮತ್ತು ಆಧುನಿಕ ತಂತ್ರಜ್ಞಾನದಲ್ಲಿ ಪ್ರತಿಯೊಬ್ಬರೂ ಮುಳುಗಿ ಹೋಗಿದ್ದು, ಈ ರೀತಿಯ ಕಾರ್ಯಕ್ರಮಗಳು ಪ್ರತಿಯೊಬ್ಬರಿಗೂ ಮಾದರಿ ಎಂದು ಬಣ್ಣಿಸಿದರು.
ಹಿಂದು ಮಲಯಾಳಿ ಸಮಾಜದ ಸಲಹೆಗಾರ ಟಿ.ಆರ್.ವಾಸುದೇವನ್ ಮಾತನಾಡಿ, ಓಣಂ ಆಚರಣೆ ಮೂಲಕ ಮಲಯಾಳಿ ಭಾಷಿಗರು ಒಂದೆಡೆ ಸೇರಿ ಆಚಾರ, ವಿಚಾರಗಳು, ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ ಕೆಲಸವಾಗಬೇಕು. ಹಾಗೆಯೇ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಸಂದರ್ಭದಲ್ಲಿ ಸ್ಥಳೀಯವಾಗಿ ಸಂಬಂಧಗಳನ್ನು ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಬಿ.ರಾಜ, ಗ್ರಾ.ಪಂ. ಸದಸ್ಯರಾದ ಪ್ರೇಮಾ, ರಾಧಮಣಿ, ಅರುಣಕುಮಾರಿ, ಸೀತೆ, ಪಿಡಿಒ ಅಸ್ಮಾ, ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಕೆ.ಮೂರ್ತಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಬಾಲಕೃಷ್ಣರೈ, ಸೋಮವಾರಪೇಟೆ ತಾಲೂಕು ಹಿಂದು ಮಲಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಡಿ.ಪ್ರಕಾಶ್, ಕಾಂಗ್ರೆಸ್ ಮುಖಂಡ ಪಿ.ಎಂ.ಬಿಜು, ಸ್ಯಾಮ್ಸನ್, ಕಾಫಿ ಬೆಳೆಗಾರರಾದ ನೀಲಮ್ಮ ಪೆಮ್ಮಯ್ಯ, ಅಡಿಕೇರಿ ಧರ್ಮಪ್ಪ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಯಶೋಧಾ, ನಾಕೂರು ಶಿರಂಗಾಲ ಕೊಡವ ಕೂಟದ ಅಧ್ಯಕ್ಷ ಯಶು ತಮ್ಮಯ್ಯ, ಗೌಡ ಸಮಾಜದ ಅಧ್ಯಕ್ಷ ಎಂ.ಎಂ.ಕಾರ್ಯಪ್ಪ, ಬೆಳ್ಳರಿಕಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ.ಬೋಪಯ್ಯ, ಮಳೂರು ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಬಿ.ಗಣೇಶ್, ಕಾನ್‌ಬೈಲ್ ರಾಮಮಂದಿರ ಅಧ್ಯಕ್ಷ ಬಿ.ಜಿ.ನರೇಂದ್ರ, ವಿ.ಕೆ.ಗಂಗಾಧರ್ ಇದ್ದರು.
ಮಲಯಾಳಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬಳಿಕ ಸಮಾಜದ ಮಕ್ಕಳಿಗೆ ನೃತ್ಯ ಸ್ಪರ್ಧೆ ಹಾಗೂ ಮಹಿಳೆಯರಿಗೆ ಪೂಕಳಂ ಬಿಡಿಸುವ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾನ್‌ಬೈಲ್ ಹಿಂದು ಮಲಯಾಳಿ ಕಾರ್ಯದರ್ಶಿ ಶಂಕರನಾರಾಯಣ, ಕೆ.ಎಂ.ವಿನೀಶ್ ಇತರರು ಇದ್ದರು.
ಕಾರ್ಯಕ್ರಮಕ್ಕೂ ಮೊದಲು ಕಲ್ಲೂರು ಗ್ರಾಮದ ಬಸವೇಶ್ವರ ದೇವಾಲಯದ ಆವರಣದಿಂದ ಕೇರಳದ ಚಂಡೆಯೊಂದಿಗೆ ಹಮ್ಮಿಕೊಂಡಿದ್ದ ಓಣಂ ಮೆರವಣಿಗೆಯನ್ನು ಸಮಾಜದ ಅಧ್ಯಕ್ಷ ಕೆ.ಬಿ.ರಾಜ ಹಾಗೂ ಗ್ರಾಪಂ ಸದಸ್ಯೆ ರಾಧಾಮಣಿ ಉದ್ಘಾಟಿಸಿದರು.
ಕಲ್ಲೂರಿನಿಂದ ಹೊರಟ ಮೆರವಣಿಗೆ ಕಾನ್‌ಬೈಲು ಸರ್ಕಾರಿ ಪ್ರಾಥಮಿಕ ಶಾಲೆ ಬಳಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಮಲೆಯಾಳಿ ಸಮಾಜದ ಮಹಿಳೆಯರು, ಮಕ್ಕಳು ಹಾಗೂ ಪುರುಷರು ಸಾಂಪ್ರದಾಯಿಕ ಉಡುಗೆ ತೊಟ್ಟು ಹೆಜ್ಜೆ ಇಟ್ಟರು.
ಕಾರ್ಯಕ್ರಮದಲ್ಲಿ ಮಾವೇಲಿ ಛದ್ಮವೇಷಧಾರಿಯಾಗಿ ಕೇರಳದ ಮಟ್ಟಾನೂರಿನ ಅಭಿ ಗಮನ ಸೆಳೆದರು. ಶಾಲಾ ಕೊಠಡಿಯಲ್ಲಿ ಸಮಾಜದ ಮಹಿಳೆಯರು ಹಾಗೂ ಮಕ್ಕಳು ಶ್ರದ್ಧಾಭಕ್ತಿಯಿಂದ ಬಿಡಿಸಿದ್ದ ಪೂಕಳಂ ನೋಡುಗರ ಗಮನ ಸೆಳೆಯಿತು.