

ಕುಮಟಾ: ಮೀಸಲಾತಿ ಪಡೆಯುವಲ್ಲಿನ ಸಮಸ್ಯೆ ಹಾಗೂ ನೌಕರರು ಬಡ್ತಿ ಪಡೆಯುವಲ್ಲಿ ಅವಕಾಶ ವಂಚಿತರಾಗುತ್ತಿರುವ ಬಗ್ಗೆ ತಾಲೂಕಿನ ಮಾಸೂರಿಗೆ ಬುಧವಾರ ಭೇಟಿ ನೀಡಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರಿಗೆ ಗ್ರಾಮ ಒಕ್ಕಲು ಸಮಾಜದವರು ಮನವಿ ಸಲ್ಲಿಸಿದರು.
ನಮ್ಮನ್ನು ಹಿಂದುಳಿದ ಪ್ರವರ್ಗ 1ರಲ್ಲಿ ಪರಿಗಣಿಸಲಾಗಿದ್ದು, ಈ ಮೀಸಲಾತಿಯಡಿ ರಾಜ್ಯದಲ್ಲಿ 106 ಪಂಗಡಗಳು ಸೇರಿವೆ. ಹೀಗಾಗಿ ಶೇ. 4 ಮೀಸಲಾತಿಯನ್ನು ಶೇ. 10ಕ್ಕೆ ಏರಿಸಬೇಕು. ಪ್ರವರ್ಗ 1ರಲ್ಲಿ ಒಳ ಮೀಸಲಾತಿ ಸೃಷ್ಟಿಸಿ ಗ್ರಾಮ ಒಕ್ಕಲು ಸಮಾಜಕ್ಕೆ ಪ್ರವರ್ಗ 1 ಎ ಅಡಿ ಪರಿಗಣಿಸಬೇಕು. ಬಡ್ತಿ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ-ಪಂಗಡಗಳಿಗೆ ನೀಡಿದ ನಿಯಮ ಅನ್ವಯವಾಗಬೇಕು. ಗ್ರಾಮ ಒಕ್ಕಲು ಸಮಾಜಕ್ಕೂ ಅತಿ ಹಿಂದುಳಿದವರೆಂದು ಪರಿಗಣಿಸಿ ಬಡ್ತಿ ಪ್ರಕ್ರಿಯೆ ನಡೆಸಬೇಕು ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ತಹಸೀಲ್ದಾರ್ ಎಸ್.ಎಸ್. ನಾಯ್ಕಲ್ಮಠ, ಉಪತಹಸೀಲ್ದಾರ್ ಸತೀಶ ಗೌಡ, ಗೋವಿಂದ ಪಟಗಾರ, ಜಿ.ಕೆ. ಪಟಗಾರ, ಶ್ರೀಧರ ಗೌಡ ಉಪ್ಪಿನಗಣಪತಿ, ನಾರಾಯಣ ಗೌಡ, ಸಮಾಜ ಕಲ್ಯಾಣಾಧಿಕಾರಿ ಗಣೇಶ ಪಟಗಾರ ಇತರರಿದ್ದರು.
ತಾಲೂಕಿನ ತಣ್ಣೀರಕುಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಜಯಪ್ರಕಾಶ ಹೆಗ್ಡೆ ಅವರು ಹಾಲಕ್ಕಿ ಸಮಾಜದವರ ಸಮಸ್ಯೆಗಳನ್ನು ಆಲಿಸಿದರು. ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ದಶಕಗಳಿಂದ ಬೇಡಿಕೆ ಇಡುತ್ತಿದ್ದೇವೆ. ಆದ್ದರಿಂದ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಒಕ್ಕಲು ಸಮಾಜಕ್ಕೆ ಸಂಬಂಧಿಸಿದವರ ಭೂ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಲಾಗುವುದು. ಗ್ರಾಮ ಒಕ್ಕಲು ಮುಂತಾದ ಹಿಂದುಳಿದ ಸಮಾಜದವರು ಹೆಚ್ಚಿರುವೆಡೆ ಶಿಕ್ಷಕರ ಕೊರತೆ ನೀಗಿಸಲಾಗುವುದು. ಪ್ರವರ್ಗ 1 ರಡಿ ಸೇರಿದ ಮುಂದುವರಿದ ಜಾತಿ ಜನಾಂಗಗಳ ಮೀಸಲಾತಿ ಅಥವಾ ಅತಿ ಹಿಂದುಳಿದವರ ಮೀಸಲಾತಿ ಪರಿಷ್ಕರಣ ವಿಚಾರ ಸರ್ಕಾರದ ಗಮನದಲ್ಲಿದೆ. ಉಳಿದಂತೆ ಯಾವುದೇ ಸಮಸ್ಯೆಗಳನ್ನು ಸ್ಥಳೀಯವಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಪರಿಹರಿಸಲಾಗುವುದು. | ಜಯಪ್ರಕಾಶ ಹೆಗ್ಡೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ