ಆಯುರ್ವೆದ ಪದ್ದತಿಯಲ್ಲಿ ನಡೆಯಲಿ ಸಂಶೋಧನೆ

h8-Ayurveda 2
Published on

ಹುಬ್ಬಳ್ಳಿ: ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೆದ ಪದ್ಧತಿಯಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ಈ ಮೂಲಕ ವಿಶ್ವದಾದ್ಯಂತ ಪಸರಿಸುವ ಮಾರ್ಕೆಟಿಂಗ್ ಟ್ರೆಂಡ್ ಸಿದ್ಧಪಡಿಸಬೇಕು ಎಂದು ನ್ಯೋರೋ ಸರ್ಜನ್ ಡಾ. ಸುರೇಶ ದುಗಾಣಿ ಸಲಹೆ ನೀಡಿದರು.

ಹೆಗ್ಗೇರಿಯ ಆಯುರ್ವೆದ ಮಹಾವಿದ್ಯಾಲಯ ಹಾಗೂ ಬಿಎನ್​ಆರ್​ಎಸ್ ಸಹಯೋಗದಲ್ಲಿ ಇಲ್ಲಿನ ಗೋಕುಲ ರಸ್ತೆಯ ಕಾಟನ್ ಕೌಂಟಿ ಕ್ಲಬ್​ನಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ರಿಸರ್ಚ್ ಹಾಗೂ ಮೆಥಡಾಲಜಿ ಸೆಮಿನಾರ್ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರು ಅಲೋಪಥಿ ಔಷಧವೇ ಮೇಲೆಂಬುವಂತೆ ಬಿಂಬಿಸಿದರು. ಇದರ ಪರಿಣಾಮ ನಮ್ಮತನವನ್ನು ನಾವು ಕಳೆದುಕೊಂಡೆವು ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ 2016ರ ವರದಿ ಪ್ರಕಾರ ಶೇ. 60ರಷ್ಟು ಜನರು ಅಲೋಪಥಿ ಹೊರತುಪಡಿಸಿ ಇತರ ಪದ್ಧತಿಯ ಔಷಧಗಳತ್ತ ವಾಲುತ್ತಿದ್ದಾರೆ. ಇದರಲ್ಲಿ ಭಾರತದ ಆಯುರ್ವೆದವೂ ಒಂದು. ಪ್ರಧಾನಿ ನರೇಂದ್ರ ಮೋದಿ ಅವರು ಆಯುರ್ವೆದ ಪದ್ಧತಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮೂಲಕ ಮತ್ತಷ್ಟು ಮೆರಗು ನೀಡಿದ್ದಾರೆ ಎಂದು ಹೇಳಿದರು.

ಆಯುರ್ವೆದ ಸೇವಾ ಸಮಿತಿ ಸಭಾಪತಿ ಗೋವಿಂದ ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಆಹಾರವೇ ಆರೋಗ್ಯ. ಈ ಪದ್ಧತಿ ನಮ್ಮ ಪರಂಪರಾಗತವಾಗಿ ಬಂದಿದೆ. ಅಲೋಪಥಿ ಔಷಧ ಬಂದ ಮೇಲೆ ನಾವು ಮರೆತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಆಯುರ್ವೆದಕ್ಕೆ ಸಂಬಂಧಿಸಿದ ನೀತಿ-ನಿರೂಪಣೆಗಳು ಜನಮನ್ನಣೆ ಗಳಿಸುತ್ತಿವೆ ಎಂದರು.

ಆಯುರ್ವೆದ ಕಾಲೇಜ್ ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ವಿವಿಧ ವಿಷಯಗಳ ಕುರಿತು ಸೆಮಿನಾರ್​ಗಳು ನಡೆದವು.

ಸಮಿತಿ ಕಾರ್ಯದರ್ಶಿ ಸಂಜೀವ ಜೋಶಿ, ಎಸ್.ಆರ್. ಮಾಮಲೇದೇಶಪಾಂಡೆ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯ ಡಾ.ಜೆ.ಆರ್. ಜೋಶಿ, ಡಾ. ಮಹೇಶ ಸಾಲಿಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net