

ಸೋಮವಾರಪೇಟೆ: ಯಾವುದೇ ಧರ್ಮದಲ್ಲಾದರೂ ಧಾರ್ಮಿಕ ಕೇಂದ್ರಗಳು ಮನುಷ್ಯನ ಸಂಬಂಧಗಳನ್ನು ಬೆಸೆಯುವ ಉತ್ತಮ ಕೆಲಸ ಮಾಡಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಇಲ್ಲಿನ ಜಲಾಲಿಯ ಮಸೀದಿ ವತಿಯಿಂದ ಮಸೀದಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸೌಹಾರ್ದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮಸೀದಿ, ದೇವಸ್ಥಾನ ಅಥವಾ ಚರ್ಚ್‌ಗಳಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ. ಆರಾಧನಾಲಯಗಳು ಮನುಷ್ಯರ ನಡುವೆ ಉತ್ತಮ ಸಂಬಂಧ ಬೆಸೆಯುವ ಕೆಲಸ ಮಾಡಿದರೆ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ವಾತಾವರಣ ಇರುತ್ತದೆ ಎಂದರು.
ಧರ್ಮಗುರು ಮೌಲಾನ ಅಬೂಬಕ್ಕರ್ ಸಿದ್ದಿಕ್ ಮೋಂಟುಗೋಳಿ ಮಾತನಾಡಿ, ಪ್ರವಾದಿ ಮಹಮ್ಮದ್ ಅವರ ಕಾಲದಲ್ಲಿಯೂ ಮಸೀದಿ ಜ್ಞಾನದ ಕೇಂದ್ರವಾಗಿತ್ತು. ಇಂದಿಗೂ ಅವರ ಸಂದೇಶಗಳು ಸಾರ್ವಕಾಲಿಕ. ಹಾಗಾಗಿ ಮಕ್ಕಳಿಗೆ ಮಹಾನ್ ಸಂತರ ಸಂದೇಶಗಳನ್ನು ತಿಳಿಹೇಳುವ ಕೆಲಸ ಆಗಬೇಕಾಗಿದೆ ಎಂದರು.
ಭಗವಂತನೊಂದಿಗೆ ಅನುಸಂಧಾನ ಮಾಡುವುದೇ ಎಲ್ಲ ಧರ್ಮಗಳ ಸಾರ ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಎಲ್ಲ ಹಬ್ಬವನ್ನು ಎಲ್ಲಾ ಧರ್ಮದವರೂ ಸೇರಿ ಆಚರಿಸುತ್ತಾರೆ. ಜಿಲ್ಲೆಯ ಜನರ ನೈಜ ಭಾವನೆಗಳನ್ನು ಅರಿತು ಪ್ರೀತಿ ವಿಶ್ವಾಸದಿಂದ ಬದುಕಲು ಇಂತಹ ಆಚರಣೆಗಳು ಅವಶ್ಯಕ ಎಂದು ಸೇಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ವಂದನೀಯ ಗುರು ಫ್ರಾನ್ಸಿಸ್ ಚೆರಕ್ಕಲ್ ಹೇಳಿದರು.
ಸೋಮವಾರಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎ.ಆದಂ ಅವರನ್ನು ಮಸೀದಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಲಾಲಿಯ ಮಸೀದಿ ಅಧ್ಯಕ್ಷರಾದ ಎಂ.ಬಿ.ಇಬ್ರಾಹಿಂ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿ ಪದಾಧಿಕಾ ರಿಗಳಾದ ಅಬ್ದುಲ್ ಸಮದ್, ಕರೀಂ, ಆಲಿ ಸಖಾಫಿ, ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಬಜೆಗುಂಡಿ ಖಿಳಾರಿಯ ಮಸೀದಿ ಅಧ್ಯಕ್ಷ ಕೆ.ಎ.ಯಾಕೂಬ್, ಕಾಗಡಿಕಟ್ಟೆ ಮಸೀದಿ ಅಧ್ಯಕ್ಷ ಮಹಮ್ಮದ್, ಉಸ್ತಾದ್ ಮುನೀರ್ ಸಅದಿ ಮತ್ತಿತರರು ಇದ್ದರು.