ಗುರು-ವಿರಕ್ತರ ಸಮನ್ವಯ ಒಂದಾಗಲಿ

KMG 5-1
ಕಮತಗಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಜ್ಜಯಿನಿ ಪೀಠದ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಮಾತನಾಡಿದರು. ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ, ಶಿವಕುಮಾರ ಸ್ವಾಮೀಜಿ, ಹುಚ್ಚೇಶ್ವರ ಸ್ವಾಮೀಜಿ, ಒಪ್ಪತ್ತೇಶ್ವರ ಸ್ವಾಮೀಜಿ ಇತರರಿದ್ದರು.
Published on

ಕಮತಗಿ: ಗುರು-ವಿರಕ್ತರ ಸಮನ್ವಯ ಈ ನಾಡಿನಲ್ಲಿ ಮತ್ತೇ ಒಂದಾಗಿ, ಈ ಸಮಾಜಕ್ಕಾಗಿ ಎಲ್ಲರೂ ಒಂದಾಗಿ ನಡೆಯಬೇಕಾಗಿದೆ ಎಂದು ಉಜ್ಜಯಿನಿ ಪೀಠದ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಗುರು ಚನ್ನಬಸವೇಶ್ವರ ಹಿರೇಮಠ ಹಾಗೂ ಕಲ್ಯಾಣಮಂಟಪ ಕಟ್ಟಡಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಾನಗಲ್ ಕುಮಾರೇಶ್ವರ ಶಿವಯೋಗಿಗಳು, ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಒಂದೇ ಶರೀರದ ಎರಡು ಭಾಗಗಳಾಗಿ, ಒಂದೇ ನೋಟದ ಎರಡು ಕಣ್ಣುಗಳಾಗಿ ಸಮಾಜವನ್ನು ಅದ್ಭುತವಾಗಿ ಮುನ್ನಡೆಸಿದ ದಿವ್ಯಶಕ್ತಿಗಳಾಗಿದ್ದರು. ಗುರು-ವಿರಕ್ತರ ಸಮನ್ವಯ ಮತ್ತೇ ಒಂದಾಗಿ ಸಮಾಜಕ್ಕಾಗಿ ಎಲ್ಲರೂ ಒಂದಾಗಿ ನಡೆಯಬೇಕಾಗಿದೆ ಎಂದರು.

ಭಾರತವು ಮಠ-ಮಂದಿರಗಳ ದೇಶವಾಗಿದೆ. ದೇಶದಲ್ಲಿರುವಷ್ಟು ಗುಡಿ, ಗುಂಡಾರ, ಮಠ ಮಂದಿರಗಳನ್ನು ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ಕಾಣಲು ಸಾಧ್ಯವಿಲ್ಲ. ಮಠ ಮಂದಿರಗಳಿವೆ ಎನ್ನುವ ಕಾರಣಕ್ಕೆ ಜನರಲ್ಲಿ ನೆಮ್ಮದಿ, ಪರಸ್ಪರ ಸಹಕಾರ, ಸಹಭಾಳ್ವೆ, ಪ್ರೀತಿ, ಪ್ರೇಮ, ವಿಶ್ವಾಸ, ಭ್ರಾತತ್ವಭಾವ ಕಾಲನುಕಾಲದಿಂದ ಇರುವುದನ್ನು ನೋಡುತ್ತಿದ್ದೇವೆ. ಇದೇ ಕಾರಣಕ್ಕಾಗಿ ದೈವ ಭಕ್ತಿ, ಧರ್ಮದ ಹಾದಿ, ಗುರುವಿನ ಮೇಲಿನ ಭಕ್ತಿ ಭಾವನೆ ಭಾರತೀಯರ ನರನಾಡಿಗಳಲ್ಲಿ ಒಂದರ್ಥದಲ್ಲಿ ಬೆರೆತು ಹೋಗಿದೆ ಎಂದರು.

ಮಠಗಳು ಈ ದೇಶದ ದಾರ್ಶನಿಕ ಮತ್ತು ಆಧ್ಯಾತ್ಮಿಕ ಇತಿಹಾಸ ಕಟ್ಟುವಲ್ಲಿ, ಸಾಮಾಜಿಕ ಮೌಲ್ಯಗಳನ್ನು ಪುನರುತ್ಥಾನ ಮಾಡುವಲ್ಲಿ, ಕೌಟುಂಬಿಕ ಮೌಲ್ಯಗಳು ಮತ್ತೆ ಪುನರುಜ್ಜೀವನಗೊಳ್ಳುವಲ್ಲಿ ಮಠಗಳ ಪಾತ್ರ ಬಹಳ ದೊಡ್ಡದಿದೆ. ಗುರು ವರ್ಗದ ಮಠವೇ ಇರಲಿ, ವಿರಕ್ತ ವರ್ಗದ ಮಠವೇ ಇರಲಿ ಊರಿಗೊಂದು ಮಠ ಇರಬೇಕು ಎನ್ನುವ ಪದ್ಧತಿ, ಪರಂಪರೆ ಇದೆ ಎಂದರು.

ಒಂದು ಕಾಲದಲ್ಲಿ ಉಜ್ಜಯಿನಿ ಪೀಠ ಮಾತ್ರವಲ್ಲದೇ ನಾಡಿನ ಎಲ್ಲ ಮಠಗಳು ನ್ಯಾಯದಾನವನ್ನು ಮಾಡುತ್ತಿದ್ದವು. ಉಜ್ಜಯಿನಿ ಪೀಠದಿಂದ ಕೊಡುವ ತೀರ್ಪನ್ನು ಆಗಿನ ಕಾಲದ ಬ್ರಿಟಿಷ್ ಅಧಿಕಾರಿಗಳೂ ಗೌರವಿಸುತ್ತಿದ್ದರು ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ. ಸರ್ಕಾರಗಳು ಜನರಿಗೆ ಶಿಕ್ಷಣ ನೀಡುವ ಮುಂಚೆಯೇ ಮಠಗಳಲ್ಲಿ ಶಾಲೆಗಳು ಆರಂಭವಾಗಿ ಮಠಗಳು ಶಿಕ್ಷಣ ಕೇಂದ್ರಗಳಾಗಿದ್ದರು. ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗುವ ಪೂರ್ವದಲ್ಲಿ ನಾಡಿನಲ್ಲಿ ಜಾತಿ, ಜನಾಂಗ, ಧರ್ಮ ಭೇದವಿಲ್ಲದೆ, ಅನ್ನ, ಅಕ್ಷರ, ಆಶ್ರಯ, ಅಧ್ಯಾತ್ಮ, ಅರಿವು ಎನ್ನುವ ಪಂಚಸಂಗಮಗಳನ್ನು ಕೊಟ್ಟು, ಎಲ್ಲರ ಬದುಕಿಗೆ ಆರ್ಥಿಕ ಅನುಕೂಲತೆ, ಸಾಮಾಜಿಕ ಭದ್ರತೆ ನೀಡಿದ ಕೀರ್ತಿ ವೀರಶೈವ ಲಿಂಗಾಯಿತ ಕ್ಷೇತ್ರಕ್ಕೆ ಸಲ್ಲಿತ್ತದೆ. ನಾಡಿನ ಅನೇಕ ಮಠಗಳು ಭಕ್ತರ ಪ್ರತೀಕವಾಗಿ ಘನತೆ, ಗೌರವ ಉಳಿಸಿಕೊಂಡು ಬಂದಿವೆ ಎಂದರು.

ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ, ಹಿರೇಮಠದ ಶಿವಕುಮಾರ ಶಿವಾಚಾರ್ಯರು, ಹುಚ್ಚೇಶ್ವರ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿದರು. ಗುಳೇದಗುಡ್ಡ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯರು, ಅನವಾಲ ಡಾ.ಕೈಲಾಸಪತಿ ಸ್ವಾಮಿಗಳು, ಹೂವಿನಹಳ್ಳಿ ಶಿವಯ್ಯಸ್ವಾಮಿಗಳು, ಬೇವೂರ ಗ್ಯಾನಪ್ಪ ಅಜ್ಜನವರು, ಅಮೀನಗಡದ ಮಾತೋಶ್ರೀ ಚಿಕ್ಕಮಾಣಿಕೇಶ್ವರಿ ತಾಯಿ, ಹುಬ್ಬಳ್ಳಿಯ ಮಿದುಳು ಬೆನ್ನುಹುರಿ ನರರೋಗ ತಜ್ಞ ಡಾ. ರಾಜೇಂದ್ರ ದುಗಾಣಿ, ದಯಾನಂದ ಕಿಣಗಿ, ಗಣೇಶ ಶಾಸಿ ಹಿರೇಮಠ, ಸಂಗಪ್ಪ ಗಾಣಿಗೇರ ಇತರರಿದ್ದರು. ಶಿಕ್ಷಕರಾದ ಬಿ.ಬಿ. ಸಿಂಗದ, ಪ್ರಕಾಶ ಅಚನೂರ, ಅಗ್ನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net