

ಬಾಳೆಹೊನ್ನೂರು: ರಾಜ್ಯಸರ್ಕಾರ ಮಲೆನಾಡು ಭಾಗದಲ್ಲಿ ರೈತರ ಒತ್ತುವರಿ ತೆರವು ಮಾಡುವ ಮೊದಲು ಇಲ್ಲಿನ ವಾಸ್ತವಿಕತೆ ಅರಿತುಕೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಟಿ.ಎಂ.ಉಮೇಶ್ ಕಲ್ಮಕ್ಕಿ ಹೇಳಿದ್ದಾರೆ.
ಮಲೆನಾಡು ಭಾಗದಲ್ಲಿ ಹೆಚ್ಚಿನ ಅರಣ್ಯ ಒತ್ತುವರಿ ಬಡ, ಮಧ್ಯಮ ವರ್ಗದ ಜನರು ತಮ್ಮ ಜೀವನೋಪಾಯಕ್ಕಾಗಿ ಮಾಡಿದ್ದು, ಇಂತಹ ಒತ್ತುವರಿ ತೆರವು ಮಾಡಿದರೆ ಬಡ ಜನರು ತಮ್ಮ ಬದುಕು ಕಳೆದುಕೊಳ್ಳಬೇಕಾಗುತ್ತದೆ. ಕೇರಳದಲ್ಲಿ ಸಂಭವಿಸಿದ ಭೂಕುಸಿತವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿನ ಒತ್ತುವರಿ ತೆರವಿಗೆ ಮುಂದಾಗಿರುವುದು ಅವೈಜ್ಞಾನಿಕ ಎಂದು ಹೇಳಿಕೆಯಲ್ಲಿ ದೂರಿದ್ಧಾರೆ.
ಕೇರಳದಲ್ಲಿ ಅನಧಿಕೃತ ರೆಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಾಣ, ಗುಡ್ಡ ಅಗೆತ, ಅಕ್ರಮ ಗಣಿಗಾರಿಕೆಯಿಂದ ಅಲ್ಲಿ ಭೂ ಕುಸಿತಗಳು ಸಂಭವಿಸಿರುವ ಸಾಧ್ಯತೆಯಿದೆ.
ಆದರೆ ಮಲೆನಾಡು ಭಾಗದಲ್ಲಿ ರೈತರು ಅಕ್ರಮ ಕಾರ್ಯಗಳನ್ನು ಮಾಡುತ್ತಿಲ್ಲ. ರೈತರು ಅರಣ್ಯ ಇಲಾಖೆಗಿಂತ ಹೆಚ್ಚಿನ ಪರಿಸರ ರಕ್ಷಣೆ ಮಾಡುತ್ತಿದ್ದಾರೆ. ವಿಶೇಷವಾಗಿ ಸೊಪ್ಪಿನಬೆಟ್ಟ, ಗೋಮಾಳ, ಕುಮ್ಕಿ, ಕಾಣೆ, ಬೆಣೆ ಜಮೀನುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಇಂತಹ ಒತ್ತುವರಿ ತೆರವು ಮಾಡಿದರೆ ರೈತರು ಸಂಕಷ್ಟಕ್ಕೀಡಾಗುವುದರೊಂದಿಗೆ ಇಲ್ಲಿನ ವ್ಯಾಪಾರ, ವಹಿವಾಟು, ಆರ್ಥಿಕತೆಯೂ ಕುಸಿತಗೊಳ್ಳುವ ಆತಂಕ ಎದುರಾಗಿದೆ.
ಸರ್ಕಾರ ರೈತರು ಮಾಡಿರುವ ಒತ್ತುವರಿಯನ್ನು ಲೀಸ್ ಆಧಾರದಲ್ಲಿ ನೀಡುವ ಕ್ರಮ ಕೈಗೊಳ್ಳಬೇಕು. ಕೇರಳಕ್ಕೂ, ಕರ್ನಾಟಕಕ್ಕೂ ಹೋಲಿಕೆ ಮಾಡಬಾರದು. ಇಲ್ಲಿನ ರೈತರು ಯಾರೂ ಅರಣ್ಯ ನಾಶ ಒಪ್ಪುವುದಿಲ್ಲ. ಅರಣ್ಯ ಇಲಾಖೆ ಕಾರ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಾರೆ ಎನ್ನುವುದನ್ನು ಅರಿಯಬೇಕು.
ಮಲೆನಾಡು ಭಾಗದ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಮಲೆನಾಡು ಭಾಗದಲ್ಲಿನ ಒತ್ತುವರಿ ತೆರವು ಬದಲು ರೈತರ ಜೀವನಕ್ಕೆ ಮಾಡಿಕೊಂಡಿರುವ ಒತ್ತುವರಿಯನ್ನು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸ್ಥಿತಿ ಸುಧಾರಿಸುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.