ರಿಯಲ್ ಎಸ್ಟೇಟ್ ಉದ್ಯಮಿಗಳು ಪರಿಸರ ಕೇಂದ್ರಿತ ಅಭಿವೃದ್ಧಿಗೂ ಮುಂದಾಗಲಿ: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತೆ ಬಿ.ಆರ್.ಮಮತಾ ಸಲಹೆ

14
Published on

ಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಗಳು ಪರಿಸರ ಕೇಂದ್ರಿತ ಅಭಿವೃದ್ಧಿಗೂ ಮುಂದಾಗಲಿ ಎಂದು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತೆ ಬಿ.ಆರ್.ಮಮತಾ ಸಲಹೆ ನೀಡಿದರು.
ಕ್ರೆಡೈ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ವಿಭಾಗದಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಮೈರಿಯಲ್ಟಿ-2024 ಆಸ್ತಿ, ನಿವೇಶನ ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬಡಾವಣೆ ನಿರ್ಮಾಣಕ್ಕಾಗಿ ಫಲವತ್ತಾದ ಕೃಷಿ ಭೂಮಿಯನ್ನು ಬಳಸಿಕೊಳ್ಳುತ್ತಾ ಹೋದರೆ ಮುಂದೆ ಆಹಾರ ನೀಡುವ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ರಸ್ತೆ, ಫ್ಲೈ ಓವರ್ ನಿರ್ಮಾಣ, ಭೂ ಪರಿವರ್ತನೆ ವೇಳೆ ಸಾವಿರಾರು ಮರಗಳು ನಾಶವಾಗುತ್ತವೆ. ಹಸಿರು ಪರಿಸರ ಉಳಿಸುವ ಸುಸ್ಥಿರ ಅಭಿವೃದ್ಧಿ ಮಾದರಿಯನ್ನು ಉದ್ಯಮಿಗಳು ಅಳವಡಿಸಿಕೊಳ್ಳಬೇಕಿದೆ ಎಂದರು.
ಪರಿಸರ ನಾಶದಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಬೆಂಗಳೂರು, ಮೈಸೂರಿನಂತಹ ಸಮಶೀತೋಷ್ಣ ನಗರಗಳಲ್ಲೂ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಹಾಗಾಗಿ ನಾವೇನು ಮಾಡಬೇಕು ಎಂಬುದರತ್ತ ತುರ್ತು ಆಲೋಚಿಸಬೇಕು ಎಂದು ಹೇಳಿದರು.
ಕೋವಿಡ್ ನಂತರ ಪ್ರತಿಯೊಬ್ಬರೂ ಜೀವನ ಭದ್ರತೆಗೆ ಒತ್ತು ನೀಡಿದ್ದಾರೆ. ಹೀಗಾಗಿಯೇ ಆಸ್ತಿ ಖರೀದಿ ಹೆಚ್ಚಳವಾಗಿದೆ. ಅದ್ದರಿಂದ ರಿಯಲ್ ಎಸ್ಟೇಟ್ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಗ್ರಾಹಕರು ಆಸ್ತಿ ಖರೀದಿಗೂ ಮುನ್ನ ದಾಖಲೆಗಳನ್ನು ಪರಿಶೀಲಿಸಬೇಕು. ಉದ್ಯಮಿಗಳು ಬಡಾವಣೆಗಳ ಅಭಿವೃದ್ಧಿ ಮಾಡುವಾಗ ನಿಯಮಾವಳಿಗಳನ್ನು ಮೀರಿ ಭವಿಷ್ಯದಲ್ಲಿ ಸಮಸ್ಯೆಗೆ ಸಿಲುಕಿಸಬಾರದು ಎಂದು ಸಲಹೆ ನೀಡಿದರು.
ಸ್ಥಿರಾಸ್ತಿಗಳ ನೋಂದಣಿ, ಹಸ್ತಾಂತರ, ಅಡಮಾನ, ಭೋಗ್ಯ ಮತ್ತು ಅಧಿಕಾರ ಪತ್ರ ಮುಂತಾದ ಸೇವೆಗಳನ್ನು ಕಾವೇರಿ 2.0 ತಂತ್ರಾಂಶದ ಮೂಲಕ ಒದಗಿಸಲಾಗಿದೆ. ಸಾರ್ವಜನಿಕರು ಉಪನೋಂದಣಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲಿದೆ. ಆ್ಯಪ್‌ನ ಪ್ರಯೋಜನ ಪಡೆಯಬೇಕು. ನೋಂದಣಿ ಕಚೇರಿಯಲ್ಲಿ ದಿನವಿಡೀ ಕಾಯಬೇಕಿಲ್ಲ. ನೋಂದಣಿ ಮಾಡಿಸುವುದು ಹೇಗೆಂದು ಚಿಂತಿತರಾಗಬೇಕಿಲ್ಲ. ಮಧ್ಯವರ್ತಿಗಳ ಮೊರೆ ಹೋಗಬೇಕಿಲ್ಲ ಎಂದು ತಿಳಿಸಿದರು.
ತೆರಿಗೆ ಸಂಗ್ರಹವು ವಾರ್ಷಿಕ ಶೇ.15ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ವರ್ಷ 20 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ. ಮಾರ್ಚ್ ವೇಳೆಗೆ ರಿಯಲ್ ಎಸ್ಟೇಟ್ ವಲಯ ವೇಗದ ಅಭಿವೃದ್ಧಿ ಸಾಧಿಸಲಿದೆ ಎಂದು ಹೇಳಿದರು.
ಮೈಸೂರು ನಗರ ಹಾಗೂ ಗ್ರಾಮೀಣ ಯೋಜನಾ ಜಂಟಿ ನಿರ್ದೇಶಕಿ ಎಂ.ಎಸ್.ಪಂಕಜಾ, ಕ್ರೆಡೈ ಮೈಸೂರು ಅಧ್ಯಕ್ಷ ಶ್ರೀಹರಿ, ಕಾರ್ಯದರ್ಶಿ ಅರುಣ್ ಪಂಡಿತ್, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಅಧ್ಯಕ್ಷ ಎ.ಎಸ್.ಯೋಗನರಸಿಂಹ, ಕಾರ್ಯದರ್ಶಿ ಕೆ.ಆರ್.ಪ್ರಭಾಕರ್ ರಾವ್, ಮೈ ರಿಯಲ್ಟಿ ಅಧ್ಯಕ್ಷ ಕೆ.ಎನ್.ರವಿಶಂಕರ್, ಕಾರ್ಯದರ್ಶಿ ಅಶ್ವಿನ್ ಆರ್.ಪಾಳೇಗಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net