ರಂಗಚಂದ್ರ ಪ್ರಶಸ್ತಿ ರಾಷ್ಟ್ರಮಟ್ಟಕ್ಕೆ ವಿಸ್ತರಿಸಲಿ

25 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಂಗಭೂಮಿಯಲ್ಲಿ ವಿಶಿಷ್ಟ ರೀತಿಯ ಹಲವು ಪ್ರಯೋಗಗಳ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ರಂಗ ನಿರ್ದೇಶಕ ಕೆ. ಜಗುಚಂದ್ರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ರಾಷ್ಟ್ರ ಮಟ್ಟದಲ್ಲಿ ನೀಡುವಂತಾಗಲಿ ಎಂದು ನ್ಯಾಯವಾದಿ ಪ್ರಕಾಶ ಉಡಿಕೇರಿ ಹೇಳಿದರು.
ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ರಂಗಚಂದ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಗಿನ ಕಾಲದಲ್ಲಿ ಪ್ರಶಸ್ತಿಗಳನ್ನು ಪಡೆಯಲು ಎಷ್ಟೋ ಶಿಫಾರಸ್ಸು ಮಾಡುವ ಸ್ಥಿತಿ ಇದೆ. ಆದರೆ ಈ ಕಲಾ ಪ್ರತಿಷ್ಠಾನ ಯಾವುದೇ ಶಿಫಾರಸ್ಸು ಪರಿಗಣಿಸದೆ ಯೋಗ್ಯರನ್ನೇ ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಡಾ. ಶ್ರೀಧರ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆ. ಜಗುಚಂದ್ರ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. ಅವರು ಪ್ರತಿಭಾವಂತ ಕಲಾವಿದರಾಗಿದ್ದರು ಎಂದರು.
ಬಸವರಾಜ ಬೆಂಗೇರಿ ಅವರಿಗೆ ರಂಗಚಂದ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲ್ಲಪ್ಪ ಹೊಂಗಲ, ಸಿದ್ದಲಿಂಗಪ್ಪ ನರೇಗಲ್ಲ, ಮಹಾದೇವ ಸತ್ತಿಗೇರಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಫ್​.ಬಿ ಕಣವಿ, ನಾಗರಾಜ ಕಲ್ಲೂರ, ಅನಿಲ ಮೇತ್ರಿ, ಕಾಶಿನಾಥ ಅಸೂಟಿ, ಅಶೋಕ ರೆಡ್ಡಿ, ಶಾಂತವೀರ ಬೆಟಗೇರಿ, ಶಶಿಧರ ಬುದ್ನಿ, ಗಿರಿಮಲ್ಲ ಬೆಳ್ಳೆನವರ, ದೇವಾನಂದ ರತ್ನಾಕರ, ಅನಿಲ ಪುರಾಣಿಕ, ರೂಪಾ ಪಾಟೀಲ, ಎ.ಬಿ. ಬಿಜಾಪುರ, ಎಲ್​.ಆರ್​. ಬೂದಿಹಾಳ, ಆರತಿ ದೇವಶಿಖಾಮಣಿ, ಸಂಗೀತಾ ದೇವದಾಸ, ಸುನಿತಾ ರಂಗನಾಯಕ ಅವರಿಗೆ ಸನ್ಮಾನಿಸಲಾಯಿತು.
ಎನ್​.ಡಿ. ದೇಸಾಯಿ, ಎಂ.ಎಸ್​. ಫರಾಸ್​, ಇತರರು ಇದ್ದರು. ಪ್ರೇಮಾನಂದ ಶಿಂಧೆ ಸ್ವಾಗತಿಸಿದರು. ಶ್ರೀಶೈಲ ಚಿಕನಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net