ಪುರ ಗ್ರಾಪಂ ಅವ್ಯವಹಾರ ತನಿಖೆಯಾಗಲಿ

17KDR2
ಪುರ ಗ್ರಾಪಂಗೆ ಸೇರಿದ ಕೆಲ ಸ್ಥಿರಾಸ್ಥಿಗಳನ್ನು ಕಾಣೆ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ತಾಪಂ ಇಒಗೆ ಪುರ ಗ್ರಾಮಸ್ಥರು ಮನವಿ ಸಲ್ಲಿಸಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಪಿ.ಎಂ. ರಾಜಣ್ಣ, ಗುರುಮೂರ್ತಿ, ಚಿದಾನಂದ ಮತ್ತಿತರಿದ್ದರು.
Published on

ಕಡೂರು: ಗ್ರಾಮ ಪಂಚಾಯಿತಿಗೆ ಸೇರಿದ ಕೆಲ ಸ್ಥಿರ ಸ್ವತ್ತುಗಳು ಕಾಣೆಯಾಗಿರುವುದರ ಹಿಂದೆ ಪುರ ಗ್ರಾಮ ಪಂಚಾಯಿತಿ ಹಾಲಿ ಅಧ್ಯಕ್ಷರ ಪತಿ ಮತ್ತು ಪಿಡಿಒ ಅವರ ಕೈವಾಡವಿದೆ ಅವರ ಮೇಲೆ ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪುರ ಗ್ರಾಮಸ್ಥರು ತಾಪಂ ಇಒ ಸಿ.ಆರ್.ಪ್ರವೀಣ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಪಿ.ಎಂ.ರಾಜಣ್ಣ ಪಂಚಾಯಿತಿಗೆ ಸೇರಿದ ಪವರ್ ಜನರೇಟರ್ ಅನ್ನು ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ. ಕುಡಿಯುವ ನೀರಿನ 30 ಪೈಪುಗಳನ್ನು ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ತೆಗೆದುಕೊಂಡು ಹೋಗಿದ್ದಾರೆ. ಹಳೆ ಗ್ರಾಮ ಪಂಚಾಯಿತಿ ಕಟ್ಟಡ ಕೆಡವಿದ ನಂತರ ತಳಪಾಯದಲ್ಲಿ ಸಿಕ್ಕಿದ್ದ ಕಲ್ಲುಗಳನ್ನು ನಿಯಮವಾಗಿ ಹರಾಜು ಮಾಡಬೇಕಿತ್ತು. ಆದರೆ ಈ ಇಬ್ಬರು ಸೇರಿ ಅವುಗಳನ್ನು ಖಾಸಗಿಯಾಗಿ ಶೇಖರಣೆ ಮಾಡಿದ್ದಾರೆ. ಈ ಕುರಿತು ಗ್ರಾಮಸ್ಥರು ಕೇಳಿದರೆ ಪಿಡಿಒ ಸಮರ್ಪಕ ಉತ್ತರ ನೀಡುತ್ತಿಲ್ಲ. ಕೂಡಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅವ್ಯವಹಾರ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪಂಚಾಯಿತಿಯಲ್ಲಿ ನಡೆದಿರುವ ಘಟನೆಗಳ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗೆ ದೂರು ನೀಡಲಾಗಿದೆ ಎಂದರು.
ಪಿ.ಎಸ್.ಗುರುಮೂರ್ತಿ, ಚಿದಾನಂದ, ಗ್ರಾಮಸ್ಥರಾದ ವಿನಾಯಕ, ರವಿಪ್ರಕಾಶ, ಹರೀಶ, ಸ್ವಾಮಿ, ಮಹಾರಾಜ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net