

ಹಗರಿಬೊಮ್ಮನಹಳ್ಳಿ: ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಮಸ್ಯೆಗಳನ್ನು ಪ್ರಸ್ತಾಪಿಸಬಹುದು ಎಂದು ವಿಜಯನಗರ ಜಿಲ್ಲಾ ಎಸ್.ಪಿ. ಜಾನ್ಹವಿ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರ ಸಮಸ್ಯೆಗಳ ಇತ್ಯರ್ಥಕ್ಕೆ, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪೊಲೀಸ್ ಸಿಬ್ಬಂದಿ ನಿಮ್ಮ ಮನೆಬಳಿ ಬಂದಾಗ ಸಹಕರಿಸಬೇಕು. ನಿಮ್ಮಲ್ಲಿಗೆ ಪೊಲೀಸ್ ಬಂದಾಗ ಯಾವುದೇ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಆಯಾ ಇಲಾಖೆಯ ಗಮನಕ್ಕೆ ತರಲಾಗುವುದು. ನಿಮ್ಮ ಮನೆ ಬಳಿ ಅಥವಾ ಯಾರಾದರೂ ಅಪರಿಚಿತರು ಕಂಡು ಬಂದರೆ ಕೂಡಲೇ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿ, ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದರು.
ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶ ದೊಡ್ಮನಿ ಮಾತನಾಡಿ, ವಿಪತ್ತಿನ ಸಮಯದಲ್ಲಿ ಸಹಾಯಕ್ಕೆ ಬರುವುದು ಪೊಲೀಸರ ಪ್ರಮುಖ ಕಾರ್ಯವಾಗಿದೆ. ಸಾರ್ವಜನಿಕರಿಗೆ ಸಹಕರಿಸಲು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಸಹಕಾರಿಯಾಗಿದೆ. ಅಪರಾಧ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಸಮಾಜದಲ್ಲಿ ಪೊಲೀಸ್ ಸಹಭಾಗಿತ್ವ, ಸಾರ್ವಜನಿಕ ವಲಯದಲ್ಲಿ ನಂಬಿಕೆ ಬೆಳೆಸುವುದು ಸೇರಿ ಇನ್ನಿತರೆ ಸಹಾಯಕ ಅಂಶಗಳು ಪ್ರಮುಖ ಪಾತ್ರ ವಹಿಸಲಿವೆ ಎಂದರು.