

ಆಲೂರು: ಸ್ವಚ್ಛ ಪಟ್ಟಣ ರೂಪಿಸುವ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಹಾಕದೆ ಕಸದ ವಾಹನಕ್ಕೆ ನೀಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಹಾಸನ ಜಿಲ್ಲಾ ಪಂಚಾಯಿತಿ ಹಾಗೂ ಆಲೂರು ತಾಲೂಕು ಪಂಚಾಯಿತಿ ನೇತೃತ್ವದಲ್ಲಿ ಆಯೋಜಿಸಿದ್ದ ಸ್ವಚ್ಛ ಭಾರತ್ ಅಭಿಯಾನಕ್ಕೆ ಪ್ರತಿಜ್ಞೆ ಬೋಧನೆಯ ಮೂಲಕ ಚಾಲನೆ ನೀಡಿ ಮಾತನಾಡಿದರು. ಮಹಾತ್ಮ ಗಾಂಧಿ ಕಂಡ ಸ್ವಚ್ಛ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ನಂತರ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆದು ಗಲೀಜು ಮಾಡದೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವಂತೆ ಸ್ವಚ್ಛತೆಯೇ ಸೇವೆ ಧ್ಯೇಯವಾಕ್ಯದಡಿ ಕಸವನ್ನು ಕಸ ಸಂಗ್ರಹಿಸುವ ವಾಹನಕ್ಕೆ ನೀಡಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಕಸ ವಿಲೇವಾರಿಗೆ ಮುಂದಾಗಬೇಕು. ಪಕ್ಷಭೇದ ಮರೆತು ಎಲ್ಲರೂ ಅಭಿಯಾನಕ್ಕೆ ಕೈಜೋಡಿಸಿದಾಗ ಹೆಚ್ಚುತ್ತಿರುವ ಕಸವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಟಿಎಪಿಸಿಎಂಎಸ್ ನಿರ್ದೇಶಕ ಮಾವನೂರು ಮೋಹನ್, ತಾಲೂಕು ಬಿಜೆಪಿ ಖಜಾಂಚಿ ಹೇಮಂತ್, ಮುಖಂಡರಾದ ಜೆಸಿಬಿ ಲೋಕೇಶ್, ತಾಲೂಕು ಪಂಚಾಯಿತಿ ಎಡಿ ಕೇಶವಮೂರ್ತಿ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಕ್ಯಾಪ್ಶನ್: ಆಲೂರು ತಾಪಂ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಛ ಭಾರತ್ ಅಭಿಯಾನದಲ್ಲಿ ಶಾಸಕ ಸಿಮೆಂಟ್ ಮಂಜು ಪ್ರತಿಜ್ಞೆ ಬೋಧನೆಯ ಮೂಲಕ ಚಾಲನೆ ನೀಡಿದರು. ಶ್ರೀನಿವಾಸ್, ಕೇಶವ ಮೂರ್ತಿ, ಮಾವನೂರು ಮೋಹನ್, ಜೆಸಿಬಿ ಲೋಕೇಶ್ ಇತರರಿದ್ದರು.