ಯೋಜನೆಗಳು ಜನರಿಗೆ ತಲುಪಲಿ

byn (1)
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಗ್ರಾಮೀಣ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ರಸ್ತೆ, ಕುಡಿಯುವ ನೀರು ಹಾಗೂ ಮತ್ಸೃಸಂಪತ್ತಿನ ಅಭಿವೃದ್ದಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಜನತೆಗೆ ತಲುಪಿಸುವಲ್ಲಿ ಇಲಾಖೆಗಳು ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಸೂಚಿಸಿದರು.

ಬೈಂದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕೇಂದ್ರ ಸರ್ಕಾರ ಪ್ರೋತ್ಸಾಹಿತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕೆಲವು ಮೂಲಸೌಕರ್ಯ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿರುವ ಕುರಿತು ಸಂಸದರ ಗಮನ ಸೆಳೆಯಲಾಯಿತು. ಜತೆಗೆ ಯೋಜನೆಯ ಗುರಿ ಸಾಧನೆಯಲ್ಲಿ ಮಂದಗತಿ ಇರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ವಿವಿಧ ಯೋಜನೆಗಳ ಮಾಹಿತಿ: ಜಲಜೀವನ ಮಿಷನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಪಿಎಂ ಕಿಸಾನ್, ಆಯುಷ್ಮಾನ್ ಭಾರತ, ಆತ್ಮನಿರ್ಭರ್ ಭಾರತ, ಉಜ್ವಲಾ ಯೋಜನೆ, ಮತ್ಸೃಸಂಪದ ಯೋಜನೆ ಸಹಿತ ತಾಲೂಕು ಹಾಗೂ ಜಿಲ್ಲಮಟ್ಟದ ಯೋಜನಾ ಪ್ರಗತಿ ಕುರಿತು ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದರು.

ಸ್ಥಳೀಯ ಸಮಸ್ಯೆಗಳ ಪ್ರಸ್ತಾಪಿಸಿದ ಜನಪ್ರತಿನಿಧಿಗಳು ಯೋಜನೆಗಳ ಲಾಭ ಸರ್ವರಿಗೂ ಸಮಾನವಾಗಿ ತಲುಪುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಯೋಜನೆಗಳ ಗುರಿ ಸಾಧನೆಗಾಗಿ ವಿಶೇಷ ಕಾರ್ಯಯೋಜನೆ ರೂಪಿಸಲು ತೀರ್ಮಾನಿಸಲಾಯಿತು.

ಕೇಂದ್ರದ ಜನಪರ ಯೋಜನೆಗಳನ್ನು ಸ್ಥಳೀಯ ಮಟ್ಟದಲ್ಲಿ ಜಾರಿಗೊಳಿಸುವ ಕುರಿತು ಸಂಸದರು ಹಾಗೂ ಅಧಿಕಾರಿಗಳು ಚರ್ಚಿಸಿದರು. ಶಾಸಕ ಗುರುರಾಜ ಗಂಟಿಹೊಳೆ, ಜಿಲ್ಲಾಧಿಕಾರಿ ಸ್ವರೂಪ ಕೆ.ಟಿ., ಜಿಪಂ ಸಿಇಓ ಪ್ರತೀಕ್ ಬಾಯಲ್, ಡಿಎಫ್‌ಓ ಗಣಪತಿ ನಾಯ್ಕ, ಶಿವರಾಮ್, ಎಸಿ ರಶ್ಮಿ, ದಿಶಾ ಸಮಿತಿ ಸದಸ್ಯರಾದ ರಮೇಶ್ ಪೂಜಾರಿ, ಪ್ರಿಯದರ್ಶಿನಿ ಬೆಸ್ಕೂರು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಪ್ರಮುಖರು ಉಪಸ್ಥಿತರಿದ್ದರು.

ಅಧಿಕಾರಿಗಳಿಗೆ ಸಂಸದ ತಾಕೀತು

ಕೇಂದ್ರ ಸರ್ಕಾರದ ಆಶಯದಂತೆ ಮನೆಮನೆಗೂ ನೀರಿನ ಸೌಲಭ್ಯಕ್ಕಾಗಿ ಜಲಜೀವನ್ ಮಿಷನ್‌ಗೆ ಚಾಲನೆ ನೀಡಲಾಗಿದ್ದು, ಚೊಚ್ಚಲ ಬಾರಿಗೆ ಬೈಂದೂರಿನಲ್ಲೇ ಆರಂಭಿಸಲಾಗಿದೆ. ಆದರೂ ಕಾಮಗಾರಿಯ ವೇಗ ನಿರೀಕ್ಷಿತ ಮಟ್ಟದಲ್ಲಿ ಸಾಗಿಲ್ಲ. ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲೇಬೇಕು ಎಂದು ಸಂಸದರು ಅಧಕಾರಿಗಳಿಗೆ ತಾಕೀತು ಮಾಡಿದರು.

ಬೈಂದೂರು-ಯಡ್ತರೆ-ರಾಣೆಬೆನ್ನೂರು ಸಂಪರ್ಕದ ರಾ.ಹೆ.766ಸಿಗೆ ಪ್ರಥಮ ಹಂತದಲ್ಲಿ 350 ಕೋಟಿ ರೂ.ಕಾಮಗಾರಿ ಮುಗಿದಿದ್ದು, ದ್ವಿತೀಯ ಹಂತದ ಕಾಮಗಾರಿಗೆ 394 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಮಳೆಗಾಲದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಶಿರೂರಿನಿಂದ ತಲ್ಲೂರು ತನಕ ನಾಲ್ಕು ಅಂಡರ್‌ಪಾಸ್ ನಿರ್ಮಾಣಕ್ಕೆ 170 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.. ಕೊಲ್ಲೂರು-ಕೊಡಚಾದ್ರಿ ಕೇಬಲ್‌ಕಾರ್ ಯೋಜನೆಗೆ ಸ್ಥಳ ತಕರಾರಿನಿಂದ ಹಿನ್ನಡೆಯಾಗಿದೆ. ಬೈಂದೂರಿನಲ್ಲಿ ಏರ್‌ಸ್ಟ್ರಿಪ್ ನಿರ್ಮಾಣದ ಕುರಿತು ಈಗಾಗಲೇ ಮುಖ್ಯಮಂತ್ರಿಗೆ ಮಾಹಿತಿ ನೀಡಲಾಗಿದೆ. -ಬಿ. ವೈ. ರಾಘವೇಂದ್ರ, ಸಂಸದ https://www.vijayavani.net/udupis-kaavi-artist-dr-janardana-rao-havanje-was-awarded-the-book-prize-by-lalitha-kala-academy-bangalore https://www.vijayavani.net/district-and-zone-level-teachers-day-celebration

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net