

ಚಿಕ್ಕೋಡಿ: ಕಲ್ಪಿತ ನ್ಯಾಯಾಲಯ ಸ್ಪರ್ಧೆಗಳು ಕಾನೂನು ವಿದ್ಯಾರ್ಥಿಗಳಿಗೆ ವೃತ್ತಿ ಕೈಗೊಳ್ಳಲು ಸಹಕಾರಿಯಾಗಲಿವೆ ಎಂದು ಬೆಂಗಳೂರಿನ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಅನಿಲ ಕಟ್ಟಿ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಸಿ.ಬಿ.ಕೋರೆ ಬಹುತಾಂತ್ರಿಕ ಮಹಾವಿದ್ಯಾಲಯದ ಸಭಾಭವನದಲ್ಲಿ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಹಾಗೂ ಬೆಳಗಾವಿ ಕೆಎಲ್‌ಇ ಲಾ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ 2 ದಿನಗಳ ಕಾಲ ಹಮ್ಮಿಕೊಂಡಿದ್ದ ನಾಲ್ಕನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ವಕೀಲಿ ವೃತ್ತಿಯಲ್ಲಿ ದಾವೆಗಳನ್ನು ತಯಾರಿಸಿಕೊಳ್ಳುವುದು ಹೇಗೆ, ವಾದ ಮಂಡನೆ ಹೇಗೆ ಎಂಬುವುದನ್ನು ತಿಳಿಸುವುದೇ ಈ ಕಲ್ಪಿತ ನ್ಯಾಯಾಲಯದ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಕಾರ್ಯ ಕ್ಷಮತೆ ಹೆಚ್ಚಿಸಲು ಇದು ಸಹಕಾರಿಯಾಗಿದೆ. ಎರಡು ಪಕ್ಷದವರ ಹೇಳಿಕೆ ಆಲಿಸಿ ನ್ಯಾಯ ನಿರ್ಣಯಿಸಬೇಕು. ವಕೀಲಿ ವೃತ್ತಿಯನ್ನು ದಾರಿದೀಪವಾಗಿ ಬಳಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಯಾಗಿ ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಡಾ. ಸಿ.ಎಸ್. ಪಾಟೀಲ ಮಾತನಾಡಿ, ವಕೀಲಿ ವೃತ್ತಿ ಪವಿತ್ರ ಮತ್ತು ಸ್ವಂತ ವೃತ್ತಿಯಾಗಿದೆ. ವೃತ್ತಿ ಮತ್ತು ಸೇವೆ ವಕೀಲರ ಆದರ್ಶಗಳಾಗಿವೆ ಎಂದು ತಿಳಿಸಿದರು. ಬೆಳಗಾವಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ ಶಿಗ್ಲಿ ಮಾತನಾಡಿ, ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ಭಾಗವಹಿಸಬೇಕು ಎಂದರು.
ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಸಗರೆ, ಡಾ. ಜೆ.ಎಂ.ಮಲ್ಲಿಕಾರ್ಜುನಯ್ಯ ಮಾತನಾಡಿದರು. ಪ್ರಾಚಾರ್ಯ ಡಿ.ಬಿ. ಸೋಲಾಪುರೆ ಸ್ವಾಗತಿಸಿದರು. ಎಸ್.ಬಿ. ನಾಗರಾಳೆ ನಿರೂಪಿಸಿದರು. ಪಿ.ಎಂ.ಕಮತೆ ವಂದಿಸಿದರು. ಬಳ್ಳಾರಿ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ, ವಕೀಲ ಡಾ. ಜೆ.ಎಸ್.ಹಾಲಶೆಟ್ಟಿ, ಮಾಯಪ್ಪ ಪೂಜೇರಿ, ರಾಹುಲ ರಾವ್, ಜ್ಯೋತಿ ಕಾಗಿನಕರ, ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜು
ಪ್ರಾಚಾರ್ಯ ಡಾ.ಪ್ರಸಾದ ರಾಮಪುರೆ, ದರ್ಶನ ಬಿಳ್ಳುರ, ಪ್ರವೀಣ ಪಾಟೀಲ, ಡಾ.ಜ್ಞಾನೇಂದ್ರ ಚೌರಿ, ಡಾ.ವಿಜಯ ಮುರದಂಡೆ, ಬಿ.ಜಿ. ಕುಲಕರ್ಣಿ, ಪ್ರಕಾಶ ಕೋಳಿ, ಪ್ರಾಚಾರ್ಯ ಬಿ.ಕೆ. ನಿಪ್ಪಾಣಿ ಇತರರು ಇದ್ದರು.