

ಬಳ್ಳಾರಿ : ಇಲ್ಲಿನ ನೂತನ ಅಧೀನ ನ್ಯಾಯಾಲಯದ ಸಂಕೀರ್ಣದಲ್ಲಿ ನ.1 ರಾಜ್ಯೋತ್ಸವದಂದು ಹೊಸ ಕಟ್ಟಡದಲ್ಲಿ ಕಲಾಪಗಳು ಆರಂಭವಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯುತ್ ಸೌಲಭ್ಯ ಸೇರಿದಂತೆ ಬಾಕಿ ಇರುವ ಎಲ್ಲ ಕೆಲಸಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ .ಬಿ. ವರಾಳೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಾಳೂರು ರಸ್ತೆಯಲ್ಲಿ ನಿರ್ಮಿಸಲಾಗಿರುವ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಗತ್ಯವಿರುವ ಕಡೆ ನ್ಯಾಯಾಲಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕೆಲವೆಡೆ ಕಟ್ಟಡಗಳ ನವೀಕರಣ ಮಾಡಲಾಗಿದೆ. ನ್ಯಾಯಾಂಗ ಅಧಿಕಾರಿಗಳಿಗೆ ಕ್ವಾರ್ಟರ್ಸ್‌ಗಳನ್ನು ಒದಗಿಸಲಾಗಿದೆ. ನ್ಯಾಯಾಲಯಗಳಲ್ಲಿ ಕಕ್ಷಿಗಾರರರಿಗೆ ಶೌಚಗೃಹ, ಕುಡಿಯುವ ನೀರು, ನಿರೀಕ್ಷಣಾ ಕೊಠಡಿ ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವಕೀಲರು ಹಾಗೂ ಕಕ್ಷಿಗಾರರು ಸೇರಿ ಎಲ್ಲರ ಸಹಕಾರ ಅಗತ್ಯವಿದೆ. ರಥಕ್ಕೆ ಎರಡು ಗಾಲಿಗಳು ಹೇಗೆ ಮುಖ್ಯವೋ ನ್ಯಾಯ ವಿತರಣೆಯಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿಗಾರರು ಅಷ್ಟೇ ಮುಖ್ಯ ಎಂದರು.
ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ್ ಕಿಣಗಿ, ರಿಜಿಸ್ಟ್ರಾರ್ ಜನರಲ್ ಆರ್.ಜಿ. ಭರತ್ ಕುಮಾರ್, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಸ್.ಎಚ್. ಪುಷ್ಪಾಂಜಲಿ ದೇವಿ, ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿನಯ್, ಪಿಡಬ್ಲ್ಯುಡಿಯ ಕಾರ್ಯಪಾಲಕ ಎಂಜಿನಿಯರ್ ಹೇಮರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ. ಎರ‌್ರಿಗೌಡ, ಸಹಾಯಕ ಆಯುಕ್ತ ಹೇಮಂತ್‌ಕುಮಾರ್ ಮತ್ತಿತರರು ಇದ್ದರು.