

ಹುಬ್ಬಳ್ಳಿ: ಕಾವೇರಿ ವಿಚಾರವಾಗಿ ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶಿಸಬೇಕು. ಇದು ಎರಡು ರಾಜ್ಯದ ವಿಷಯ ಆಗಿರುವುದರಿಂದ ಪ್ರಧಾನ ಮಂತ್ರಿಗಳು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯಾಗಿದ್ದ ಮನಮೋಹನಸಿಂಗ್ ಅವರು ನನ್ನ ಮತ್ತು ಜಯಲಲಿತಾ ಅವರನ್ನು ಕರೆದು ಮಾತನಾಡಿದ್ದರು. ಹೀಗಾಗಿ ಅಂತಾರಾಜ್ಯ ನೀರಿನ ಬಿಕ್ಕಟ್ಟು ಪರಿಹಾರಕ್ಕೆ ಪ್ರಧಾನಿ ಅವರು ಎರಡೂ ರಾಜ್ಯಗಳ ಸಿಎಂ ಅವರನ್ನು ಕರೆದು ಮಾತನಾಡುವ ಜವಾಬ್ದಾರಿ ಇದೆ. ರಾಜ್ಯದ ಸಂಸದರ ಮೇಲೆ ಕೂಡ ಇದರ ಜವಾಬ್ದಾರಿ ಇದೆ. ಇದು ಕೇವಲ ರಾಜ್ಯ ಸರ್ಕಾರದ ವಿಷಯವಲ್ಲ. ರಾಜ್ಯದ ಹಿತಾಸಕ್ತಿ ವಿಷಯ ಎಂದರು.
ಮಹಾದಾಯಿ ವಿಚಾರವಾಗಿ ಬರೀ ಹೇಳಿಕೆಯಿಂದ ಏನೂ ಆಗುವುದಿಲ್ಲ. ಈ ವಿಷಯ ಯಾವಾಗ ಅಂತ್ಯವಾಗಲಿದೆ. ಯಾವಾಗ ನಮಗೆ ಒಂದು ಹನಿ ನೀರು ಸಿಗಲಿದೆ? ಎಂಬುದು ಮುಖ್ಯವಾಗಿದೆ. ತೀರ್ಪು ಆಯ್ತು, ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ. ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸಲು ಸಮರ್ಥವಾಗಿದೆ. ಹೀಗಾಗಿ ಮಹಾದಾಯಿ ವಿವಾದ ಬಗೆಹರಿಸಬೇಕು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 9 ವರ್ಷವಾಗಿದೆ. ಇಚ್ಛಾಶಕ್ತಿ ತೆಗೆದುಕೊಂಡು ಸಮಸ್ಯೆ ಪರಿಹರಿಸಬೇಕು ಎಂದರು.
ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಅವರು ಯಾವುದೇ ಸರ್ಕಾರ ಇದ್ದಾಗಲೂ ಅವರು ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಅಂತಹ ವ್ಯಕ್ತಿಗಳು ಈಗಿಲ್ಲ. ಕೇವಲ ರಾಜಕೀಯ ಹೇಳಿಕೆ ಕೊಡುವವರು ಇದ್ದಾರೆ ಎಂದು ಕೇಂದ್ರ ಸಚಿವ ಜೋಶಿಗೆ ಪರೋಕ್ಷವಾಗಿ ತಿವಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಮೂವರು ಡಿಸಿಎಂ ಆಗಬೇಕೆನ್ನುವುದು ವೈಯಕ್ತಿಕ ಕೂಗು. ಆದರೆ, ಇದೆಲ್ಲವನ್ನೂ ಹೈಕಮಾಂಡ್ ಗಮನಿಸುತ್ತದೆ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.