ಸ್ಮಾರಕಗಳ ಉಳಿವು ಎಲ್ಲರ ಹೊಣೆಯಾಗಲಿ

Published on

ಶ್ರೀರಂಗಪಟ್ಟಣ: ಸ್ಮಾರಕಗಳು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಶತಮಾನಗಳ ಹಿಂದಿನಿಂದ ನಡೆದುಬಂದ ಇತಿಹಾಸದ ಗತವೈಭವಗಳನ್ನು ಮಾನವನ ಪೀಳಿಗೆಗೆ ಸಾಕ್ಷಿಯಾಗಿ ನೀಡಲಿದ್ದು, ಇವುಗಳ ಉಳಿವು ನಮ್ಮ ಹೊಣೆಯಾಗಬೇಕು ಎಂದು ಅಚೀವರ್ಸ್ ಅಕಾಡೆಮಿ ಸಂಸ್ಥಾಪಕ ಡಾ.ರಾಘವೇಂದ್ರ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ವಿಶ್ವ ಪಾರಂಪರಿಕ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿರುವ ಐತಿಹಾಸಿಕ ಸ್ಮಾರಕಗಳೆಡೆಗೆ ಶೇಷಾದ್ರಿಪುರಂ ಪದವಿ ಕಾಲೇಜು ಹಾಗೂ ಜೆಎಸ್‌ಎಸ್ ಫಿಜಿಯೋಥೆರಪಿ ಕಾಲೇಜು ಸೇರಿದಂತೆ ಅಚೀವರ್ಸ್ ಅಕಾಡೆಮಿ ವಿದ್ಯಾರ್ಥಿಗಳೊಂದಿಗೆ ಪಾರಂಪರಿಕ ನಡಿಗೆ ನಡೆಸಿ ಅವುಗಳ ಮಹತ್ವದ ಕುರಿತು ಮಾತನಾಡಿದರು.

ಭರತ ಭೂಮಿಯ ಸಂಸ್ಕೃತಿ, ಋಷಿ ನೆಲೆಗಳ ಸಂಪ್ರದಾಯ, ನಮ್ಮ ರಾಜ-ಮಹಾರಾಜರು, ಸುಲ್ತಾನರ ಆಳ್ವಿಕೆ ಹಾಗೂ ಬ್ರಿಟಿಷರ ಆಡಳಿತ ಸೇರಿದಂತೆ ಸ್ಥಳನಾಮ, ಪುರಾಣ ಇವುಗಳ ಕುರಿತು ವಾಸ್ತವತೆಯೊಂದಿಗೆ ಸಂಪೂರ್ಣ ಮಾಹಿತಿಯನ್ನು ಆಧಾರ ಸಹಿತವಾಗಿ ನೀಡುವಲ್ಲಿ ನಮ್ಮಲ್ಲಿರುವ ಸ್ಮಾರಕಗಳ ಪಾತ್ರ ಮಹತ್ವಪೂರ್ಣ. ಪ್ರಸ್ತುತ ಅಳಿವಿನಂಚಿನಲ್ಲಿರುವ ಸ್ಮಾರಕಗಳ ರಕ್ಷಣೆ ಆಡಳಿತದ ಜತೆಗೆ ಪ್ರತಿಯೊಬ್ಬರ ಹೊಣೆಯಾಗಿ ನಮ್ಮ ಮುಂದಿನ ಪೀಳಿಗೆಗೂ ಉಳಿಸಿ ಕೊಡುಗೆಯಾಗಿ ನೀಡುವ ಕೆಲಸವಾಗಬೇಕು ಎಂದರು.

ಬಳಿಕ ವಿದ್ಯಾರ್ಥಿಗಳು ಪಟ್ಟಣದ ಐತಿಹಾಸಿಕ ಸ್ಥಳಗಳಾದ ಕೋಟೆ ಬಾಗಿಲು, ಕರ್ನಲ್ ಬೈಲಿಯ ಡಂಜನ್, ಓಬೆಲಿಸ್ಕ್ ಸ್ತಂಭ, ಶ್ರೀರಂಗನಾಥಸ್ವಾಮಿ ದೇವಸ್ಥಾನ ಹಾಗೂ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಜಾಗೃತಿ ಲಕಗಳನ್ನು ಹಿಡಿದು ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷಣೆಯೊಂದಿಗೆ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಜತೆಗೆ ಐತಿಹಾಸಿಕ ಸ್ಥಳ ಕಿರಂಗೂರಿನ ದಸರಾ ಬನ್ನಿಮಂಟಪ ಬಳಿ ಶ್ರಮದಾನ ಮಾಡುವ ಮುಖಾಂತರ ಸ್ವಚ್ಛತೆಗೊಳಿಸಿದರು.

ಕಿರಂಗೂರು ಗ್ರಾಮ ಪಂಚಾಯಿತಿ ಪಿಡಿಒ ಪ್ರಶಾಂತ್ ಬಾಬು, ಕಾರ್ಯದರ್ಶಿ ಲಕ್ಷ್ಮೀದೇವಿ, ಎನ್‌ಎಸ್‌ಎಸ್ ಅಕಾರಿ ಮಹೇಂದ್ರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net