ಕೊಡವರ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲಿ

05 gkp 03
ಗೋಣಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಮಾದಂಡ ಪಿ.ತಿಮಯ್ಯ, ಒಲಂಪಿಯನ್ ಚೇಂದಂಡ ನಿಕ್ಕಿನ್ ತಿಮ್ಮಯ್ಯ, ಬೊಳ್ಳಂಡ ಉನ್ನತಿ ಅಯ್ಯಪ್ಪ ಮತ್ತು ಶ್ರೀಕಾಂತ್ ಪೂವಣ್ಣ ಅವರನ್ನು ಸನ್ಮಾನಿಸಲಾಯಿತು.
Published on

ಗೋಣಿಕೊಪ್ಪ: ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕೊಡವರ ಅಸ್ತಿತ್ವದ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದ್ದು, ಕೊಡವ ಜನಾಂಗದ ಅಸ್ತಿತ್ವ ಉಳಿಯಬೇಕಾದರೆ ಮೊದಲು ಕೊಡವರ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಬೇಕು ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು.

ವಿ.ಬಾಡಗದ ಹೈ ಫ್ಲೈಯರ್ಸ್ ಸಂಸ್ಥೆ ವತಿಯಿಂದ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈ ಫ್ಲೆಯರ್ಸ್ ಕಪ್-2023ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಮುಂದಿನ ತಲೆಮಾರಿನ ಕೊಡವ ಪೀಳಿಗೆ ವಿಶೇಷ ಗಮನಹರಿಸಬೇಕು ಎಂದರು.

ಕೊಡವರ ಹಲವು ಹೆಗ್ಗಳಿಕೆಗಳ ಪೈಕಿ ಹಾಕಿ ಕ್ರೀಡೆಯೂ ಒಂದು. ಕೆಲವು ವರ್ಷಗಳ ಹಿಂದೆ ಭಾರತದ ಹಾಕಿ ತಂಡದಲ್ಲಿ ಕೊಡವ ಆಟಗಾರರ ಪ್ರಾಬಲ್ಯವಿತ್ತು. ಇದೀಗ ಕೊಡಗಿನ ಯಾವೊಬ್ಬ ಆಟಗಾರ ತಂಡದಲ್ಲಿ ಇಲ್ಲದಿರುವುದು ಗಂಭೀರವಾಗಿ ಚಿಂತಿಸಬೇಕಾದ ವಿಷಯ. ಕೊಡವರು ಕೇವಲ ಆಸ್ತಿ ಮಾಡಿಡುವ ಕೆಲಸಕ್ಕೆ ಆದ್ಯತೆ ನೀಡಬಾರದು. ಬದಲಾಗಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕೊಡವ ಕೌಟುಂಬಿಕ ಹಾಕಿ ಉತ್ಸವಗಳನ್ನು ಆಯೋಜಿಸಲು ಪ್ರತಿ ಕೊಡವ ಕುಟುಂಬ ಮುಂದೆ ಬರಬೇಕು. ಇದರಿಂದ ಕೊಡವರ ಮನೆತನದ ಹಿರಿಮೆ ಹೆಚ್ಚಾಗುತ್ತದೆ. ಹಾಕಿ ಉತ್ಸವವನ್ನು ಮಾತ್ರ ಮಾಡಿ ಮುಗಿಸಿದರೆ ಸಾಲದು. ಹಾಕಿ ಉತ್ಸವಗಳ ನೆಪದಲ್ಲಿ ಸಮಾಜಮುಖಿ ಚಿಂತನೆಯ ಜನೋಪಯೋಗಿ ಶಾಶ್ವತ ಯೋಜನೆಗಳನ್ನೂ ರೂಪಿಸುವಂತಾಗಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಕೊಡಗು ಚಿಕ್ಕ ಜಿಲ್ಲೆಯಾದರೂ ರಾಜ್ಯದ ಬೇರೆಲ್ಲ ಜಿಲ್ಲೆಗಳಿಗಿಂತ ಹೆಚ್ಚು ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದೆ. ಆದರೆ ಇದೀಗ ಕೊಡಗಿನಿಂದ ನಿರೀಕ್ಷಿತ ಮಟ್ಟದ ಕ್ರೀಡಾಪಟುಗಳು ತಯಾರಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಮುಂಬರುವ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಬಾಳುಗೋಡಿನ ಕ್ರೀಡಾಂಗಣದಲ್ಲಿ ಶಾಶ್ವತವಾಗಿ ಆಯೋಜಿಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಗೊಳ್ಳಬೇಕಿದೆ. ಇದರಿಂದ ಆತಿಥ್ಯ ವಹಿಸುವ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಕುಂಡಿಯೋಳಂಡ ಹಾಕಿ ಉತ್ಸವ-2024ರ ಆಯೋಜನಾ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ ಮಾತನಾಡಿದರು. ವಿ.ಬಾಡಗ ಹೈ ಫ್ಲೈಯರ್ಸ್ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿ.ಬಾಡಗ ಹೈ ಫ್ಲೈಯರ್ಸ್ ಸಂಸ್ಥೆ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಮಾದಂಡ ಎಸ್.ಪೂವಯ್ಯ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್, ನಾಡ್ ತಕ್ಕರಾದ ಮಳವಂಡ ಭುವೇಶ್, ಕಾಫಿ ಬೆಳೆಗಾರರಾದ ಚೇಮಿರ ಸದಾ ರಾಮಚ್ಚ, ಮಳವಂಡ ಬೋಜಮ್ಮ ಅಚ್ಚಪ್ಪ, ಚೇಮಿರ ಜಿ.ಪೂವಯ್ಯ, ಕೊಂಗಂಡ ಕಾಶಿ ಕಾರ್ಯಪ್ಪ, ವಿ ಬಾಡಗ ಹೈ ಫ್ಲೈಯರ್ಸ್ ಸಂಸ್ಥೆ ಉಪಾಧ್ಯಕ್ಷರಾದ ಚೇಮಿರ ನಂದಾ ಇತರರಿದ್ದರು.

ಸಮಾರೋಪ ಅಂಗವಾಗಿ ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ಪಿ.ತಿಮಯ್ಯ, ಅಂತಾರಾಷ್ಟ್ರೀಯ ಹಾಕಿ ಆಟಗಾರ ಒಲಂಪಿಯನ್ ಚೇಂದಂಡ ನಿಕ್ಕಿನ್ ತಿಮ್ಮಯ್ಯ, ಉದ್ಯೋನ್ಮುಖ ಅಥ್ಲೆಟಿಕ್ ತಾರೆ ಬೊಳ್ಳಂಡ ಉನ್ನತಿ ಅಯ್ಯಪ್ಪ ಮತ್ತು ಗಾಯಕ ಕೊಟ್ರಂಡ ಶ್ರೀಕಾಂತ್ ಪೂವಣ್ಣ ಅವರನ್ನು ಹೈಫ್ಲೈಯರ್ಸ್ ಸಂಸ್ಥೆ ಪರವಾಗಿ ಸನ್ಮಾನಿಸಲಾಯಿತು.

ಫೈನಲ್ ಪಂದ್ಯಕ್ಕೂ ಮುನ್ನ ಆಟಗಾರರು ಮತ್ತು ಅತಿಥಿಗಳನ್ನು ಯರವರ ಸಾಂಪ್ರದಾಯಿಕ ಚೀನಿ ದುಡಿ ವಾದ್ಯದೊಂದಿಗೆ ಮೈದಾನಕ್ಕೆ ಕರೆದುಕೊಂಡು ಬರಲಾಯಿತು. ಬಳಿಕ ಅತಿಥಿಗಳು ಎರಡೂ ತಂಡದ ಆಟಗಾರರನ್ನು ಪರಿಚಯಿಸುವುದರ ಮೂಲಕ ಫೈನಲ್ಸ್ ಪಂದ್ಯಕ್ಕೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net