

ಮೈಸೂರು: ಪ್ರಜಾಪ್ರಭುತ್ವದ ಹಬ್ಬವಾದ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗಳು ಸುಂದರವಾಗಿ ಕಂಗೊಳಿಸಲಿ, ಆ ಮೂಲಕವೂ ಮತದಾನ ಪ್ರಮಾಣ ಹೆಚ್ಚಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನೀತಿ ಸಂಹಿತೆ ಜಾರಿಯಾದ ತಕ್ಷಣ ತೆಗೆದುಕೊಳ್ಳಬಹುದಾದ ಕ್ರಮಗಳೊಂದಿಗೆ ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ನೀಡುವುದರೊಂದಿಗೆ ಮತದಾನ ಕೇಂದ್ರಗಳಿಗೆ ಬಣ್ಣ, ರಂಗೋಲಿ, ಅಕ್ಕಿಹಿಟ್ಟು ಮುಂತಾದವುಗಳನ್ನು ಬಳಸಿ ಅಲಂಕಾರ ಮಾಡುವುದರಿಂದ ಮತದಾರರಲ್ಲಿ ಮತದಾನ ಮಾಡುವ ಆಸಕ್ತಿ ಹೆಚ್ಚಾಗುತ್ತದೆ ಎಂದರು.
ಜಿಲ್ಲೆಯ 2,915 ಮತಗಟ್ಟೆಗಳನ್ನೂ ಅಂದವಾಗಿಸಿ ಸಕಲ ಸೌಲಭ್ಯಗಳೊಂದಿಗೆ ಸುಂದರವಾಗಿ ಕಾಣುವ ಪ್ರತಿ ತಾಲೂಕಿನ ಮೂರು ಮತಗಟ್ಟೆಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಲಾಗುವುದು ಎಂದರು.
ಈಗಾಗಲೇ ಗುರುತಿಸಿರುವ ಮತಗಟ್ಟೆಗಳಲ್ಲಿ ಯಾವುದೇ ವಿಧದ ಸಣ್ಣ ರಿಪೇರಿಗಳಿದ್ದರೆ ತಕ್ಷಣ ಮಾಡಿಸಿಕೊಳ್ಳಿ, ಚುನಾವಣಾ ನೀತಿ ಸಂಹಿತೆಗೂ ಮುನ್ನ ಮತಗಟ್ಟೆಗಳು ಶೇ.100 ರಷ್ಟು ಸಿದ್ಧವಿರಬೇಕು. ಯಾವುದಾದರೂ ಮತಗಟ್ಟೆಯಲ್ಲಿ ನ್ಯೂನತೆಗಳಿದ್ದರೆ ಸಂಕಷ್ಟಕ್ಕೆ ಸಿಲುಕುತ್ತೀರಿ ಎಂದು ಎಚ್ಚರಿಕೆ ನೀಡಿದರು.