ಬಡವರ ಕಷ್ಟ ಅರಿತು ರಾಜಕಾರಣ ಮಾಡಲಿ ; ಶಾಸಕ ರಮೇಶ್ ಕುಮಾರ್ ಹೇಳಿಕೆ

30 sirinivaspura -2
Published on

ಶ್ರೀನಿವಾಸಪುರ: ರಾಜಕೀಯದಲ್ಲಿರುವವರು ಬಡವರ ಕಷ್ಟ ಅರಿತು ರಾಜಕಾರಣ ಮಾಡಬೇಕು ಎಂದು ಮಾಜಿ ಸ್ಪೀಕರ್, ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.

ಬುಧವಾರ ಡಿಸಿಸಿ ಬ್ಯಾಂಕ್ ನೆರವಿನಿಂದ ಲಕ್ಷ್ಮೀಪುರ ವ್ಯವಸಾಯ ಸೇವಾ ಸಹಕಾರ ಸಂಘದಿಂದ 78 ಸ್ತ್ರೀಶಕ್ತಿ ಸಂಘಗಳಿಗೆ 3.65 ಕೋಟಿ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಿಸಿ ಮಾತನಾಡಿ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಿ ಬಡತನ ನಿರ್ಮೂಲನೆ ಮಾಡುವ ಚಿಂತನೆಯಲ್ಲಿದ್ದರೆ ಇದಕ್ಕೆ ಅಡ್ಡಿಪಡಿಸುವವರೂ ಇದ್ದಾರೆ.

ಬಡತನದ ಅರಿವಿಲ್ಲದೆ ಕೆಲವರು ಬಡವರಿಗೆ ಉತ್ತಮ ಕೆಲಸ ಮಾಡಲು ಹೋದರೆ ಹಿಂದೆಯೇ ಬಂದು ಹಿಮ್ಮಡಿ ಕತ್ತರಿಸುವ ಕೆಲಸ ಮಾಡುತ್ತಾರೆ. ಮೊದಲು ಬಡವರ ಕಷ್ಟ ಏನೆಂಬುದು ತಿಳಿದು ರಾಜಕಾರಣ ಮಾಡಲಿ ಎಂದು ಕಿಡಿಕಾರಿದರು.

ಅಂತಹವರಿಗೆ ಮುಂದಿನ ದಿನಗಳಲ್ಲಿ ಸ್ತ್ರೀಯರ ಶಕ್ತಿ ಏನೆಂಬುದು ತಿಳಿಯಲಿದೆ ಹಾಗು ಅವರ ಶಾಪ ತಟ್ಟಲಿದೆ. ಪ್ರತಿ ಮನೆಯ ಹೆಣ್ಣುಮಕ್ಕಳು ಗೌರವಯುತವಾಗಿ ಜೀವಿಸಲು ಶೂನ್ಯ ಬಡ್ಡಿಯಲ್ಲಿ ಮೊದಲಿಗೆ 30 ಸಾವಿರ ನಂತರದ ದಿನಗಳಲ್ಲಿ 50 ಸಾವಿರ ರೂ. ನೀಡಿದ್ದೇವೆ. 1 ಲಕ್ಷಕ್ಕೆ ಏರಿಸಿದಾಗ ನನಗೆ ತೃಪ್ತಿಯಾಗಲಿದೆ. ಇದರಿಂದ ಕುಟುಂಬಗಳಲ್ಲಿ ನೆಮ್ಮದಿಯ ಜೀವನ ದೊರೆತು ಮಕ್ಕಳಿಗೆ ಉತ್ತಮ ವಿಧ್ಯಾಬ್ಯಾಸ, ಉತ್ತಮ ಆರೋಗ್ಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬಡತನ ಶಾಶ್ವತವಲ್ಲ. ಅದನ್ನು ನಿರ್ಮೂಲನೆ ಮಾಡಲು ಶಾಸಕ ರಮೇಶ್ ಕುಮಾರ್ ಸರ್ಕಾರದ ಮೇಲೆ ಒತ್ತಡ ತಂದು ಶೂನ್ಯಬಡ್ಡಿಯಲ್ಲಿ ಪ್ರತಿ ಹೆಣ್ಣುಮಕ್ಕಳಿಗೆ ಸಾಲ ಸಿಗುವಂತಾಗಬೇಕು ಎಂಬ ಆಶಯದಿಂದ ಶೂನ್ಯ ಬಡ್ಡಿ ಯೋಜನೆ ಜಾರಿಗೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಸದಸ್ಯರಿಗೆ 1 ಲಕ್ಷ ರೂ. ಸಾಲ ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ. ವೆಂಕಟರೆಡ್ಡಿ, ಲಕ್ಷ್ಮೀಪುರ ವಿಎಸ್‌ಎಸ್ ಅಧ್ಯಕ್ಷ ಕೃಷ್ಣಾರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ. ಆರ್. ವೆಂಕಟಶಿವಾರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಾಬು ರೆಡ್ಡಿ, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ರೆಡ್ಡಿ, ಗ್ರಾಪಂ ಮಾಜಿ ಸದಸ್ಯ ಎಂ. ಎಸ್.ಮುನಿರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net