

ನ್ಯಾಮತಿ: ಬರುವಾಗ ದಾರಿಯುದ್ದಕ್ಕೂ ಒಣಗಿರುವ ಬೆಳೆಗಳನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವೆನಿಸಿತು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಯರಗನಾಳ್ ಗ್ರಾಮದಲ್ಲಿ ಆಯೋಜಿಸಿದ್ದ ಲಿಂ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 31ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮದ ಭಕ್ತಿ ಸಮರ್ಪಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬರ ಪರಿಸ್ಥಿತಿಯಲ್ಲಿ ರೈತನ ದುಸ್ಥಿತಿ ಕಂಡು ನೇಗಿಲ ಹಿಡಿದು ಮುಗಿಲು ನೋಡುತ್ತಾ ಅ(ಉ)ಳುವ ರೈತನ ನೋಡಲ್ಲಿ ಎಂಬ ಸಾಲುಗಳು ಒಂದು ಕ್ಷಣ ನೆನಪಿಗೆ ಬಂದವು.
ಬರ ಪರಿಸ್ಥಿತಿ ನೋಡಿ ಕುವೆಂಪು ಅವರು ರಚಿಸಿರುವ ಈ ರೈತ ಗೀತೆಯ ಸಾಲುಗಳನ್ನು ಸದ್ಯದ ಬರ ಪರಿಸ್ಥಿತಿಗೆ ಹೊಂದುವಂತೆ ಈ ರೀತಿಯಾಗಿ ಹಾಡಬಹುದೇನೋ ಎಂದ ಅವರು, ಇಂತಹ ಸಂದಿಗ್ಧ ಸಮಯದಲ್ಲೂ ಭಕ್ತಿ ಸಮರ್ಪಣಾ ಕಾರ್ಯಕ್ರಮಕ್ಕೆ ನೀವೆಲ್ಲರೂ ಸೇರಿರುವುದು ನೋಡಿದರೆ ನಿಮ್ಮಲ್ಲಿರುವ ಭಕ್ತಿ ಎಷ್ಟೆಂಬುದನ್ನು ಅಳೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಬೆಂಗಳೂರಿನಲ್ಲಿ ಹಲವಾರು ಪಕ್ಷಗಳು ಐಎನ್‌ಡಿಐಎ ಹೆಸರಿನಲ್ಲಿ ಒಟ್ಟಾಗಿ ಸೇರಿದ್ದರು. ಆದರೆ ಅದೇ ಕಾವೇರಿ ಸಮಸ್ಯೆ ಬಗೆ ಹರಿಸಲು ಇವರು ಒಟ್ಟಾಗಿ ಸೇರುವುದಿಲ್ಲ. ತಮ್ಮ ರಾಜಕೀಯ ಸ್ವರ್ಥಕ್ಕೆ ಮಾತ್ರ ಎಲ್ಲರೂ ಒಟ್ಟಾಗಿ ಸೇರುವರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಧರ್ಮ ಹಾಗೂ ಕಾನೂನು ಎರಡನ್ನೂ ಪಾಲಿಸಬೇಕು, ಅಧಿಕಾರಿಗಳು ಕಾನೂನು ಪಾಲಿಸಿದರೆ ರಾಜಕಾರಣಿಗಳು ಧರ್ಮ ಪಾಲಿಸಬೇಕು. ಧರ್ಮ ಪಾಲಿಸುವ ನೆಪದಲ್ಲಾದರೂ ಕಾವೇರಿ ಸೇರಿದಂತೆ ಇನ್ನಿತರ ಸಮಸ್ಯೆಯನ್ನು ಬಗೆಹರಿಸಬಹುದಿತ್ತು ಎಂದು ಆಶಯ ವ್ಯಕ್ತಪಡಿಸಿದರು.
ಯಾರೇ ಆಗಲಿ ಭಾರತ್ ಮಾತಾಕಿ ಜೈ ಎನ್ನುತ್ತಾರೆ ಹೊರತು ಇಂಡಿಯಾ ಕಿ ಜೈ ಅನ್ನುವುದಿಲ್ಲ ಹಾಗೂ ಭಾರತ ಸರ್ಕಾರ ಇದೆ, ಅಲ್ಲವೇ ಇಂಡಿಯಾ ಸರ್ಕಾರ ಯಾರಾದರೂ ಕರೆಯುತ್ತಾರಾ? ಎಂದು ಪ್ರಶ್ನಿಸಿದರು. ಯಾವುದನ್ನೂ ವಿವಾದ ಮಾಡುವುದು ಸಲ್ಲದು ಎಂದು ತಿಳಿಸಿದರು.
ಇಡೀ ವಿಶ್ವದಲ್ಲೇ ಭಾರತೀಯ ಸಂಸ್ಕೃತಿ ಅತ್ಯಂತ ಶ್ರೀಮಂತವಾದುದ್ದು, ಎಲ್ಲರೂ ನಮ್ಮ ಸಂಸ್ಕೃತಿಯನ್ನೇ ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ವಿಚ್ಚೇದನ ಶೇ.50 ರಷ್ಟು ನಡೆದರೆ ನಮ್ಮ ದೇಶದಲ್ಲಿ ಶೇ 2ರಿಂದ 3 ರಷ್ಟು ಮಾತ್ರ ಇದೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ ಮಾತನಾಡಿ, ಮಳೆ ಇಲ್ಲದೆ ಇರುವುದರಿಂದ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಎದುರಾಗಿದೆ. ಈ ಬಗ್ಗೆ ನಾನು ಈ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಮಾತನಾಡಿ ಮೋಡ ಬಿತ್ತನೆ ಮಾಡಿ ಎಂದು ಹೇಳಿದ್ದೆ, ಅದರೆ ಅದು ನೆರವೇರಲಿಲ್ಲ ಎಂದರು.
ಭಕ್ತಿ ಸಮರ್ಪಣೆ ಕಳೆದ 26 ವರ್ಷಗಳಿಂದಲೂ ನಿರಂತರವಾಗಿ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ನಡೆದುಕೊಂಡು ಬರುತ್ತಿದೆ. ಇದಕ್ಕೆ ಕಾರಣ ಭಕ್ತಿ ಎಂದರು. ಭಕ್ತಿ ಒಂದಿದ್ದರೆ ಸಂಸ್ಕಾರ ತಾನಾಗಿಯೇ ಬರುತ್ತದೆ ದೇವರಲ್ಲಿ, ಗುರುಗಳಲ್ಲಿ, ತಂದೆ ತಾಯಿಯರಲ್ಲಿ ಭಕ್ತಿ ಮುಖ್ಯ ಎಂದರು.
ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಸಿರಿಗೆರೆ ಶ್ರೀಮಠಕ್ಕೂ ಹಾಗೂ ನಂದಿಗುಡಿ ಬೃಹನ್ಮಠಕ್ಕೂ ಅವಿನಾವಭವ ಸಂಬಂಧ ಉಳಿಸಿಕೊಂಡು ಬರಲಾಗಿದೆ. ಹಾಗಾಗಿ ಗ್ರಾಮಗಳಲ್ಲೂ ಎಲ್ಲರು ಭ್ರಾತೃತ್ವ ಸಂಬಂಧದಲ್ಲಿ ಸಹ ಜೀವನ ನಡೆಸಿದರೆ ಸಮಾರಸ್ಯ ಜೀವನ ಸಾಗಿಸಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಸಾಗೋಣ ಎಂದರು.
ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಡಾ.ಗಂಗಪ್ಪ, ಸಾಧುವೀರಶೈವ ಸಮಾಜದ ರಾಜ್ಯಾಧ್ಯಕ್ಷ ಬಸವರಾಜಪ್ಪ ಮಾತನಾಡಿದರು.
ಮೆಗ್ಗಾನ್ ಆಸ್ಪತ್ರೆಯ ಸರ್ಜನ್ ಡಾ.ಪಿ.ಸಿದ್ದನಗೌಡ, ಸುಮತಿ ಜಯಪ್ಪ, ಡಾ.ಅವಿನಾಶ್ ಉಪನ್ಯಾಸ ನೀಡಿದರು.
ನ್ಯಾಮತಿ ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಜಿ.ಶಿವಪ್ಪ, ಸಂಘಟನೆಯ ಹೊನ್ನಾಳಿ ತಾಲೂಕು ಅಧ್ಯಕ್ಷ ಗದ್ದಿಗೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಜಿ.ರಮೇಶ್, ನಿವೃತ್ತ ಶಿಕ್ಷಕ ನಾಗೇಂದ್ರಪ್ಪ, ಶಿವಾ ಬ್ಯಾಂಕ್ ಅಧ್ಯಕ್ಷ ಶೈಲೇಶ್, ಜಿಪಂ ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ್, ಸಿಪಿಐ ರವಿ, ಮುಖಂಡರಾದ ಜಗದೀಶ್, ಹನುಮೇಗೌಡ್ರು, ರುದ್ರಗೌಡ, ಮಂಜಪ್ಪ, ಮಲ್ಲೇಶಪ್ಪ ಹಾಗೂ ಇತರರು ಇದ್ದರು.