ಪೊಲೀಸರು ಕಾರ್ಯವೈಖರಿ ಬದಲಿಸಿಕೊಳ್ಳಲಿ

ಪೊಲೀಸರು ಕಾರ್ಯವೈಖರಿ ಬದಲಿಸಿಕೊಳ್ಳಲಿ
Published on

ಕುಶಾಲನಗರ: ಜಿಲ್ಲೆಯಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರ ಹೆಗ್ಗಳಿಕೆಯ ಕುಶಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವೊಂದು ವಿಷಯಗಳಲ್ಲಿ ತಮ್ಮ ಕಾರ್ಯವೈಖರಿ ಸ್ವಲ್ಪ ಬದಲಾಯಿಸಿಕೊಳ್ಳಬೇಕಿದೆ…

ಇದು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಗುರುವಾರ ಕುಶಾಲನಗರದ ಸಂಘ ಸಂಸ್ಥೆಗಳ ಪ್ರಮುಖರನ್ನು ಸೇರಿಸಿ ನಡೆಸಿದ ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯ.

ಕುಶಾಲನಗರದಲ್ಲಿ ಭಾರಿ ಜನಸಂದಣಿಯಿಂದ ವಾಹನಗಳ ಸಂಚಾರ ಹೆಚ್ಚಾದಾಗ ಸ್ಥಳೀಯ ಕೆಲವು ಪ್ರಮುಖರು 2016ರಲ್ಲಿ ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟು ಕುಶಾಲನಗರಕ್ಕೆ ಸಂಚಾರ ಪೊಲೀಸ್ ಠಾಣೆ ತರುವಲ್ಲಿ ಯಶಸ್ವಿಯಾದರು. ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ತವರೂರಾದ ಕುಶಾಲನಗರದಲ್ಲಿ ಅವರ ದೂರದೃಷ್ಟಿ ಯೋಜನೆಗಳ ಪರಿಣಾಮ ಇವತ್ತು ಇಡೀ ರಾಜ್ಯ ಗುರುತಿಸುವ ಮಟ್ಟಿಗೆ ಬೆಳೆಯುತ್ತಿದೆ.

ಕೊಡಗು ಜಿಲ್ಲೆಯ ಹೆಬ್ಬಾಗಿಲು ಕುಶಾಲನಗರ ಅನೇಕ ಪ್ರವಾಸಿ ತಾಣಗಳನ್ನು ತನ್ನ ಮಡಿಲಿನಲ್ಲಿ ಹೊಂದಿದೆ. ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ವಾಹನಗಳಲ್ಲಿ ಇಲ್ಲಿಗೆ ಬರುವುದು ಸಾಮಾನ್ಯ. ಈ ಸಂದರ್ಭ ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರು ಅತ್ಯವಶ್ಯಕ. ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದ ನಗರದ ಸಂಚಾರ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ.

ಇಲ್ಲಿನ ಸಂಚಾರ ಪೊಲೀಸ್ ಠಾಣೆಯಲ್ಲಿ ಈಗ 30 ಪೇದೆಗಳು ಮತ್ತು ಇಬ್ಬರು ಪಿಎಸ್‌ಐಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2024ರ ಜನವರಿಯಿಂದ ಇಲ್ಲಿಯ ತನಕ 60ಕ್ಕೂ ಹೆಚ್ಚು ಅಪಘಾತ ಪ್ರಕರಣದಲ್ಲಿ ಎಫ್‌ಐಆರ್ ಆಗಿದೆ. ಒಟ್ಟು 16 ಸಾವು ಸಂಭವಿಸಿದೆ. ಠಾಣೆಯಲ್ಲೇ ಅಂದಾಜು 100 ಪ್ರಕರಣ ದಾಖಲಾಗುತ್ತಿದೆ ಎನ್ನುವ ಮಾಹಿತಿ ದೊರೆತಿದೆ. ಈ ಠಾಣೆ ಬಂದ ಕಾರಣ ಬಹುತೇಕ ವಾಹನಗಳ ದಾಖಲೆ ಪತ್ರಗಳು ಸರಿಯಾಗುತ್ತಿದೆ. ಯುವಕರು ವೇಗವಾಗಿ ಚಾಲನೆ ಮಾಡುವುದು, ವ್ಹೀಲಿಂಗ್ ಮಾಡುವುದಕ್ಕೆ ಕಡಿವಾಣ ಹಾಕುವಲ್ಲೂ ಪೊಲೀಸರ ಕೊಡುಗೆ ಇರುವ ಬಗ್ಗೆ ಸಂವಾದದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬಂದವು.

ಮತ್ತೊಂದು ಕಡೆ ಸಂಚಾರ ಪೊಲೀಸರ ಖಡಕ್ ಕ್ರಮಗಳಿಂದಾಗಿ ಪಟ್ಟಣ ಪ್ರದೇಶಕ್ಕೆ ಬರುವ ಅಕ್ಕಪಕ್ಕದ ಗ್ರಾಮೀಣ ಭಾಗದ ಜನರು ಕುಶಾಲನಗರಕ್ಕೆ ಬರುವುದು ಕಡಿಮೆಯಾಗಿದೆ. ಇದರಿಂದ ವ್ಯಾಪಾರದ ಮೇಲೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದಿದ್ದೆ ಎನ್ನುವುದು ಬಹುತೇಕ ವರ್ತಕರ ದೂರು. ನಗರದಲ್ಲಿ ಕೆಲವೇ ಪ್ರದೇಶಗಳಿಗೆ ಕೇಂದ್ರೀಕೃತವಾಗಿ ಸಂಚಾರ ಪೊಲೀಸರು ಕಾರ್ಯನಿರ್ವಹಿಸುತ್ತಾರೆ. ಶಿರಂಗಾಲದಿಂದ ನಂಜರಾಯಪಟ್ಟಣದ ತನಕ ವ್ಯಾಪ್ತಿ ಇದ್ದರೂ ಕುಶಾಲನಗರ ಬಿಟ್ಟು ಬೇರೆಡೆ ಕರ್ತವ್ಯ ಮಾಡುವುದಿಲ್ಲ ಎನ್ನುವ ಆರೋಪಗಳೂ ಕೇಳಿಬಂದವು.

ಕುಶಾಲನಗರಕ್ಕೆ ಸಂಚಾರ ಪೊಲೀಸ್ ಠಾಣೆ ಬೇಡ ಎನ್ನುವ ನಿರ್ಣಯ ಹಿಂದೊಮ್ಮೆ ಪುರಸಭೆ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲೂ ಈ ವಿಷಯ ಪ್ರಸ್ತಾಪ ಆದ ಸಂದರ್ಭ ಸಭೆಯಲ್ಲಿದ್ದ ಶಾಸಕ ಡಾ. ಮಂತರ್ ಕುಶಾಲನಗರಕ್ಕೆ ಠಾಣೆಯ ಅಗತ್ಯತೆ ಒತ್ತಿ ಹೇಳಿದ್ದರಲ್ಲದೆ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದ್ದರು. ಸಂಚಾರ ಪೊಲೀಸ್ ಠಾಣೆಗಾಗಿ ಚಿಕ್ಕಣ್ಣ ಲೇಔಟ್‌ನಲ್ಲಿ ನಿವೇಶನ ಒದಗಿಸುವಂತೆಯೂ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದ್ದರು ಎನ್ನುವುದನ್ನು ಸಂವಾದದಲ್ಲಿ ಭಾಗವಹಿಸಿದ್ದವರು ನೆನಪಿಸಿಕೊಂಡರು.
ವಾರಾಂತ್ಯ ದಿನಗಳಲ್ಲಿ ಸುಮಾರು ಲಕ್ಷಕ್ಕೂ ಅಧಿಕ ಪ್ಲೋಟಿಂಗ್ ಪಾಪ್ಯುಲೇಷನ್ ಇರುವ ಕುಶಾಲನಗರಕ್ಕೆ ಸಂಚಾರ ಪೊಲೀಸ್ ಠಾಣೆಯ ಅಗತ್ಯ ಹೆಚ್ಚಿದ್ದು, ಪೊಲೀಸರು ತಮ್ಮ ಕಾರ್ಯವೈಖರಿ ಒಂದಿಷ್ಟು ಬದಲಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಸಂವಾದದಲ್ಲಿ ಸಲಹೆಗಳು ವ್ಯಕ್ತವಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net