ಪೊಲೀಸರು ಜನಸ್ನೇಹಿಯಾಗಿ ಕೆಲಸಮಾಡಲಿ

11 SANDOOR 02
ಸಂಡೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಳ್ಳಾರಿ ವಲಯ ಐಜಿಪಿ ಬಿ.ಎಸ್. ಲೋಕೇಶ ಕುಮಾರ್ ಮಾತನಾಡಿದರು. ಬಳ್ಳಾರಿ ಎಸ್ಪಿ ಶೋಭಾರಾಣಿ, ವಿಜಯನಗರ ಜಿಲ್ಲಾ ಎಸ್ಪಿ ಬಿ.ಎಲ್.ಹರಿಬಾಬು ಇದ್ದರು.
Published on

ಸಂಡೂರು: ಪ್ರತಿ ನಿತ್ಯ ಅನೇಕರು ಒಂದಿಲ್ಲೊಂದು ಪ್ರಕರಣದಲ್ಲಿ ನೊಂದು ಠಾಣೆಗೆ ಬರುತ್ತಾರೆ. ಹೀಗೆ ನೊಂದು ಬಂದವರೊಂದಿಗೆ ಅತ್ಯಂತ ಸೌಜನ್ಯದೊಂದಿಗೆ ವರ್ತಿಸಿ ನೊಂದವರ ಸ್ಥಾನದಲ್ಲಿ ಅವರ ಕಷ್ಟ, ನೋವುಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಳ್ಳಾರಿ ವಲಯ ಐಜಿಪಿ ಬಿ.ಎಸ್.ಲೋಕೇಶ ಕುಮಾರ್ ಹೇಳಿದರು.

ಸಂಡೂರು ಮೌಂಟೇನ್ ವ್ಯಾಲಿ ರೆಸಾರ್ಟ್‌ನಲ್ಲಿ ಬಳ್ಳಾರಿ ಹಾಗೂ ಹೊಸಪೇಟೆ ಜಿಲ್ಲೆಯ 2005ನೇ ಬ್ಯಾಚ್‌ನ ಪೊಲೀಸ್ ಇಲಾಖೆಗೆ ನೇಮಕಾತಿ ಆಗಿ ಇಪ್ಪತ್ತು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.

ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಪೊಲೀಸರೆಂದರೆ ಭಯ ಅಲ್ಲ ಭರವಸೆ ಎಂಬುವುದನ್ನು ಜನ ಮಾನಸದಲ್ಲಿ ಪ್ರತಿಷ್ಠಾಪಿಸಬೇಕು. ನಿಮ್ಮ ಸೇವಾವಧಿ ಉದ್ದಕ್ಕೂ ಶ್ರಮಿಸಬೇಕು. ಸಮಾಜಕ್ಕೆ ಉತ್ತಮ ಸೇವೆ ನೀಡುವ ಧ್ಯೇಯ ನಿಮ್ಮದಾಗಿರಲಿ ಎಂದರು.

ವಿಜಯನಗರ ಜಿಲ್ಲಾ ಎಸ್ಪಿ ಬಿ.ಎಲ್.ಹರಿಬಾಬು ಮಾತನಾಡಿ, ಇಂದಿನ ಒತ್ತಡ, ಧಾವಂತದ, ಯಾಂತ್ರಿಕ ಬದುಕಿನಲ್ಲಿ ಸ್ನೇಹ, ಪ್ರೀತಿ, ಸಂಬಂಧ ಇವೆಲ್ಲ ತನ್ನ ಅರ್ಥ, ಮಹತ್ವ ಕಳೆದುಕೊಳ್ಳುತ್ತಿವೆ. ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಿಮ್ಮಲ್ಲಿಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಸಿಗೊಳಿಸುತ್ತದೆ ಎಂದರು. ಬಳ್ಳಾರಿ ಎಸ್ಪಿ ಡಾ.ವಿ.ಜೆ.ಶೋಭರಾಣಿ ಮಾತನಾಡಿದರು.

2005ನೇ ಬ್ಯಾಚ್‌ನಲ್ಲಿ ಅಗಲಿದ ತಮ್ಮ ಸಹದ್ಯೋಗಿಗಳನ್ನು ಸ್ಮರಿಸಿ, ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.. ಪ್ರಮುಖರಾದ ಚಂದ್ರಶೇಖರ್, ಶಿವಲೀಲಾ, ಬೊಮ್ಮನಗೌಡ, ರಾಜೇಂದ್ರ ಪ್ರಸಾದ್, ಲಕ್ಷ್ಮಣ ನಾಯ್ಕ, ರಾಜೇಶ್ವರಿ, ಕಂಪ್ಲಿ ಹನುಮಂತ ಅನಿಸಿಕೆಗಳನ್ನು ಹಂಚಿಕೊಂಡರು.

ತೋರಣಗಲ್ಲು ಡಿವೈಎಸ್‌ಪಿ ಪ್ರಸಾದ್ ಗೋಕಲೆ, ಸಂಡೂರು ಸಿಪಿಐ ಮಹೇಶ್ ಗೌಡ, ಪಿಎಸ್‌ಐಗಳಾದ ವೀರೇಶ್ ಮಾಳಶೆಟ್ಟಿ, ಯು.ಡಾಕೇಶ್, ಗುಲ್ಬರ್ಗಾ ಸಿಎಆರ್ ಎಸಿಪಿ ಎಚ್.ಎಂ.ಡಿ ಸರದಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net