

ಸಿದ್ದಾಪುರ: ಆಚಾರ, ವಿಚಾರ, ಸಂಸ್ಕೃತಿಯನ್ನು ಹವ್ಯಕರು ಉಳಿಸಿಕೊಂಡು ಬರಬೇಕು. ಊರನ್ನು ವೃದ್ಧಾಶ್ರಮವನ್ನಾಗಿ ರೂಪಿಸಬೇಡಿ. ತಂದೆ-ತಾಯಿಗಳ ಬಗ್ಗೆ ಗೌರವ ಭಾವನೆ ಇಟ್ಟುಕೊಂಡು ಸನ್ನಡತೆ ರೂಢಿಸಿಕೊಳ್ಳಬೇಕು ಎಂದು ಶ್ರೀ ಮನ್ನೆಲೆಮಾವಿನ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಶ್ರೀಮನ್ನೆಲೆಮಾವುಮಠದಲ್ಲಿ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಆಯೋಜಿಸಿದ್ದ ಪ್ರತಿಬಿಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ, ಸಾಹಿತ್ಯ, ಸಂಗೀತವನ್ನು ಸತತ ಪರಿಶ್ರಮದೊಂದಿಗೆ ರೂಢಿಸಿಕೊಳ್ಳಬೇಕಾಗುತ್ತದೆ. ಪ್ರತಿಬಿಂಬ ಕಾರ್ಯಕ್ರಮದ ಮೂಲಕ ಹವ್ಯಕರ ಕಲಾ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ಉನ್ನತವಾದ ವ್ಯಕ್ತಿತ್ವ ಸಂಪಾದನೆ ನಮ್ಮ ಗುರಿಯಾಗಿರಬೇಕು. ಸಮುದಾಯದ ಒಳಿತಿನ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಬೇಕು ಎಂದರು.
ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಮಾತನಾಡಿ, ಮೂವರು ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಹವ್ಯಕ ಸಂಘಟನೆ ಸಾಗುತ್ತಿದೆ. ಸ್ವಾಮೀಜಿಗಳು ಸಮಾಜದ ಕಣ್ಣುಗಳಿದ್ದಂತೆ. ಶ್ರೀಗಳವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ಹವ್ಯಕರ ವಿಶಿಷ್ಟವಾದ ಪ್ರತಿಭೆಯನ್ನು ಉಳಿಸಿ ಪೋಷಿಸಿಕೊಂಡು ಬರಬೇಕು ಎಂದರು.
ಶ್ರೀಮಠದ ಆಡಳಿತ ಸಮಿತಿ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ಗನೂರು, ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಶ್ರೀಧರ ಜೆ. ಭಟ್ಟ ಕೆಕ್ಕಾರು, ಗಣಪತಿ ಈಶ್ವರ ಹೆಗಡೆ ಉಂಬಳಮನೆ, ರಾಜಾರಾಮ ಹೆಗಡೆ ಬಿಳೇಕಲ್, ಜಿ.ಜಿ. ಹೆಗಡೆ ಬಾಳಗೋಡ, ಇತರರು ಉಪಸ್ಥಿತರಿದ್ದರು.
ಅಖಿಲ ಹವ್ಯಕ ಮಹಾಸಭಾದ ಕಾರ್ಯದರ್ಶಿ ಪ್ರಶಾಂತ ಕುಮಾರ ಭಟ್ಟ ಮಳವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಸಭಾ ನಿರ್ದೇಶಕ ಜಿ.ಎಂ. ಹೆಗಡೆ ಕಾಜಿನಮನೆ, ಜಿ.ಆರ್. ಭಾಗವಾತ್ ತ್ಯಾರ್ಗಲ್ ವಿನಾಯಕ ಭಟ್ಟ ನೆಲೆಮಾವ ಹಾಗೂ ಜಿ.ಎಸ್. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.