

ಅರಸೀಕೆರೆ ಗ್ರಾಮಾಂತರ: ತಾಲೂಕು ಛಾಯಾಗ್ರಾಹಕರ ಸಂಘದಿಂದ ಕುಟುಂಬದ ಸದಸ್ಯರಿಗೆ ಮಂಗಳವಾರ ಛಾಯಾ ಮಿಲನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಲೂಕಿನ ಅಮರಗಿರಿ ಮಾಲೇಕಲ್ಲು ತಿರುಪತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜಗದೀಶ್, ಆಧುನಿಕ ತಂತ್ರಜ್ಞಾನದಲ್ಲಿ ಛಾಯಗ್ರಾಹಕರು ಸ್ಪರ್ಧಾತ್ಮಕ ಸವಾಲು ಎದುರಿಸುತ್ತಿದ್ದು, ಗುಣಮಟ್ಟದ ಸೇವೆ ನೀಡುವುದು ವೃತ್ತಿನಿರತ ಛಾಯಗ್ರಾಹಕರ ಉದ್ದೇಶವಾಗವೇಕು ಎಂದರು.
ವೈಯಕ್ತಿಕ ಜೀವನದಿಂದ ಛಾಯಗ್ರಾಹಕರು ವಂಚಿತರಾಗುತ್ತಿದ್ದಾರೆ. ಕೆಲವೊಂದು ಬಾರಿ ಛಾಯಗ್ರಾಹಕರು ಅಹಿತಕರ ಘಟನೆಗಳನ್ನು ಎದುರಿಸುವಂತಾಗಿದ್ದು, ನೊಂದ ಛಾಯಾಗ್ರಾಹಕರೊಂದಿಗೆ ಸಂಘ ಇರುತ್ತದೆ. ಈ ಕಾರ್ಯಕ್ರಮ ಛಾಯಾಗ್ರಾಹಕರು ಮತ್ತು ಸದಸ್ಯರು ಒಂದೆಡೆ ಸೇರಿ ಮಾನಸಿಕ ಮತ್ತು ದೈಹಿಕವಾಗಿ ಚೇತೋಹಾರಿಯಾಗಿರಲು ಅನುವು ಮಾಡಿಕೊಟ್ಟಿದೆ ಎಂದ ಅವರು, ತಾಲೂಕಿನ ಛಾಯಗ್ರಾಹರ ಪರಸ್ಪರ ಭೇಟಿಯಿಂದ ಭಾವನಾತ್ಮಕ ಬೆಸುಗೆ ನಿರ್ಮಾಣವಾಗಿದೆ. ಪ್ರಕೃತಿ ಮಡಿನಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ಛಾಯಾ ಕುಟುಂಬದ ಎಲ್ಲ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಐಶ್ವರ್ಯ ಡಿಜಿಟಲ್ ಪ್ರೆಸ್ ಮಾಲೀಕರಾದ ಸಂಪತ್ ಕುಮಾರ್, ಅಂಬರೀಷ್, ಹಿರಿಯ ಛಾಯಾಗ್ರಾಹಕರಾದ ರಾಜಣ್ಣ, ರಂಗನಾಥ್, ಸಂಘದ ಕಾರ್ಯದರ್ಶಿ ಟಿ.ವಿ ಅರುಣ್ ಕುಮಾರ್, ಖಜಾಂಚಿ ಸತೀಶ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬೈರೇಶ್, ಯೋಗೇಶ್, ವಿರೂಪಾಕ್ಷ, ವಿಜಯ್, ಚೇತನ್, ಧನಂಜಯ, ಜಯರಾಂ, ಕಿರಣ್ ಕಶ್ಯಪ್, ಅಶೋಕ್ ಇತರರಿದ್ದರು.