

ಮುಂಡರಗಿ: ಛಾಯಾಗ್ರಾಹಕರೆಲ್ಲರೂ ನಾವೆಲ್ಲ ಒಂದಾಗಿ ಒಗ್ಗಟ್ಟಿನಿಂದ ಸಂಘಟಿತರಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಬೇಕು. ಛಾಯಾ ವೃತ್ತಿಯ ಮೂಲಕ ಸುಂದರ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದು ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರೇಶ ಹಡಗಲಿ ಹೇಳಿದರು.
ಪಟ್ಟಣದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಸಂಘದ 9ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಮಾತನಾಡಿ, ನಾವು ಮೊಬೈಲ್ಫೋನ್ನಲ್ಲಿ ತೆಗೆದುಕೊಂಡ ಫೋಟೋ ಬಹಳ ದಿನ ಉಳಿಯುವುದಿಲ್ಲ. ಛಾಯಾಗ್ರಾಹಕರು ತೆಗೆದ ಫೋಟೋಗಳು ಶಾಶ್ವತವಾಗಿರುತ್ತವೆ. ಹಾಗೆ ತುಂಬಾನೆ ಅಚ್ಚು ಕಟ್ಟಾಗಿ ಸುಂದರವಾಗಿರುತ್ತವೆ. ಮುಂದಿನ ಪೀಳಿಗೆಗೆ ನಾವು ಹೇಗಿದ್ದೇವು ಅನ್ನುವುದನ್ನು ಚಿತ್ರಗಳ ಮೂಲಕ ತೋರಿಸುವ ಕೆಲಸವನ್ನು ಛಾಯಾಗ್ರಾಹಕರು ಮಾಡುತ್ತಾರೆ ಎಂದರು.
ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ಸಂಕನಗೌಡ್ರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಛಾಯಾವೃತ್ತಿಯಲ್ಲಿ ಅನೇಕ ಬದಲಾವಣೆಯಾಗಿವೆ. ವೃತ್ತಿನಿತರ ಛಾಯಾಗ್ರಾಹಕರು ಬದುಕು ಕಷ್ಟಕರವಾಗಿದೆ. ಅವರ ಬದುಕಿಗೆ ಸರ್ಕಾರವು ಸಹಕಾರ ನೀಡಿ ಸೌಲಭ್ಯ ದೊರಕಿಸಿಕೊಡಬೇಕು ಎಂದರು.
ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪವನ ಮೆಹರವಾಡೆ ಮಾತನಾಡಿದರು. ರಾಜ್ಯ ಛಾಯಾರತ್ನ ಪ್ರಶಸ್ತಿ ಪುರಸ್ಕೃತ ಕಾಶೀನಾಥ ಕಲಬುರ್ಗಿ ಹಾಗೂ ಬೈಲಾಟದ ವಸ್ತ್ರವಿನ್ಯಾಸಕ ಮೌನೇಶ್ವರ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಛಾಯಾಗ್ರಹಣ ಪಿತಾಮಹ ಲೂಯಿಸ್ ಡ್ಯಾಗೋರೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಗೌರವಾಧ್ಯಕ್ಷ ಬಿ. ಬಾಬು ಪ್ರಾಸ್ತವಿಕವಾಗಿ ಮಾತನಾಡಿದರು. ಮಂಜುನಾಥ ತ್ಯಾಮನವರ, ನಾಗರಾಜ ಸೂರಣಗಿ, ಶರಣಪ್ಪ ಹೂಗಾರ, ನಾಗರಾಜ ಅರ್ಕಸಾಲಿ, ಶಿವಕುಮಾರ ಉದಂಡಿ, ಸಂತೋಷ ಅಳವಂಡಿ, ಪರುಶುರಾಮ ಡೊಗ್ನರ, ಮಾರುತಿ ಯಾವಗಲ್, ವೀರೇಶ ಅಂಗಡಿ, ವಸಂತ ಜೊಂಡಿ, ನಿಂಗಪ್ಪ ಮೇಟಿ ಹಾಗೂ ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಇತರರಿದ್ದರು. ಛಾಯಾಗ್ರಾಹಕರಾದ ತೋಟೇಶ ಅಂಗಡಿ, ರಂಗನಾಥ ಕಂದಗಲ್ ಹಾಗೂ ರಾಜು ಚಿಕ್ಕಣ್ಣವರ ನಿರ್ವಹಿಸಿದರು.