

ನಾಗಮಂಗಲ: ಸಿಕ್ಕಂತಹ ಅವಕಾಶಗಳನ್ನು ಬಳಸಿಕೊಂಡು, ಒಲಿಂಪಿಕ್ಸ್ ಮತ್ತು ಇತರ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಕೀರ್ತಿ ತಂದವರನ್ನು ಆದರ್ಶವಾಗಿಟ್ಟುಕೊಂಡು ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಛಲ ಬಿಡದೇ ಸಾಧನೆ ಮಾಡುವ ಮೂಲಕ ಗುರಿ ತಲುಪಿ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಕರೆ ನೀಡಿದರು.
ತಾಲೂಕಿನ ಬ್ರಹ್ಮದೇವರಹಳ್ಳಿಯ ರಮಾನಂದನಾಥಸ್ವಾಮಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಿಂದ ಸದೃಢ ದೇಹ ಮತ್ತು ಮನಸ್ಸನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಕ್ರಿಕೆಟ್, ವಿವಿಧ ಅಥ್ಲೆಟಿಕ್ಸ್ ಗೇಮ್‌ಗಳು, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಿ ದೇಶಕ್ಕೆ ದೊಡ್ಡ ಕೀರ್ತಿ ತಂದವರಲ್ಲಿ ಹಳ್ಳಿಯ ಮಕ್ಕಳೇ ಹೆಚ್ಚಿದ್ದಾರೆ. ಅವರ ಪ್ರಯತ್ನ ಜೀವನ ಚರಿತ್ರೆಗಳನ್ನು ಅರಿತು ಅವರನ್ನು ಮಾದರಿಯಾಗಿರಿಸಿಕೊಳ್ಳಬೇಕಿದೆ. ಗ್ರಾಮೀಣ ಮಟ್ಟದಲ್ಲಿ ಇಂಥ ಕ್ರೀಡಾಕೂಟಗಳು ಹೆಚ್ಚು ನಡೆಯಬೇಕು. ಅದರಿಂದ ನಮ್ಮಲ್ಲಿ ಪೈಪೋಟಿಯ ಜತೆಗೆ ಸೌಹಾರ್ದತೆ ಬೆಳೆಯುತ್ತದೆ ಎಂದರು.
ಸರ್ಕಾರವೂ ಸಹ ಕ್ರೀಡೆಗೆ ಮತ್ತು ಕ್ರೀಡಾಪಟುಗಳ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ, ಸಹಕಾರ ಕೊಡುತ್ತಿದೆ. ಅದನ್ನು ಬಳಸಿಕೊಂಡು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ, ಇಂಥ ಕ್ರೀಡಾಕೂಟಗಳಿಗೆ ಒಂದು ಅರ್ಥ ಬರುತ್ತದೆ. ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡಿ, ಉತ್ತೇಜಿಸಿದರೆ ಕ್ರೀಡಾ ಪ್ರತಿಭೆಗಳು ಹೊರಬರಲು ಅವಕಾಶವಾಗುತ್ತದೆ. ಒಂದಲ್ಲ ಒಂದು ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ವಿದ್ಯಾರ್ಥಿ ದಿಸೆಯಿಂದಲೇ ರೂಢಿಸಿಕೊಳ್ಳಬೇಕು ಎಂದರು.
ಪ್ರಾಥಮಿಕ ಹಂತದಲ್ಲಿ ಯಾವ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತೇವೆ. ಅವು ನಮ್ಮ ಜೀವನದ ಕೊನೆಯವರೆಗೆ ಉಳಿಯುತ್ತದೆ. ಉದಾಹರಣೆಗೆ ನಾವು ಚಿಕ್ಕವರಿದ್ದಾಗ ಖೋಖೋ ಕಬಡ್ಡಿ, ಬ್ಯಾಡ್ಮಿಂಟನ್ ಮುಂತಾದವನ್ನು ಆಡಿ ಅವುಗಳ ಬಗ್ಗೆ ತಿಳಿದುಕೊಂಡರೆ, ನಮ್ಮ ಜೀವನದ ಕೊನೆಯವರೆಗೂ ನಾವು ಅಂಥ ಆಟಗಳ ಬಗ್ಗೆ ಆಸಕ್ತಿ ಹೊಂದಿರುತ್ತೇವೆ. ಹಾಗಾಗಿ ನಾವು ಬಾಲ್ಯದಲ್ಲಿ ಆಸಕ್ತಿ ವಹಿಸಿ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅವುಗಳಲ್ಲಿ ವಿಜೇತರಾಗುವುದರಿಂದ ನಾವು ಹುಟ್ಟಿದ ಊರಿಗೆ, ನಮ್ಮ ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರಬಹುದು. ಇಲ್ಲಿ ಭಾಗವಹಿಸಿ ತಾಲೂಕು ಮಟ್ಟದಲ್ಲಿ ಗೆದ್ದವರು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಗೆದ್ದು, ರಾಷ್ಟ್ರೀಯ ಮಟ್ಟದಲ್ಲಿ ಆಡಿ, ತಾಲೂಕಿಗೆ, ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತನ್ನಿ ಎಂದು ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಬ್ರಹ್ಮದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಧರ್ಮಪ್ರಸಾದ್, ಗ್ರಾಪಂ ಸದಸ್ಯರಾದ ರವಿ, ಮಂಡ್ಯ ಜಿಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ನಾಗಮಂಗಲ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೆ.ರುದ್ರೇಶ್, ಮಂಡ್ಯ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪರಮಶಿವಯ್ಯ ಸೇರಿದಂತೆ ಮತ್ತಿತರಿದ್ದರು.