ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸಲಿ

DND Chalane
Published on

ದಾಂಡೇಲಿ: ರಾಜ್ಯ ಸರ್ಕಾರ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿದ್ದು, ಮೂಲಸೌಕರ್ಯಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ನೀಡಬೇಕು. ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಗುಣಮಟ್ಟದಿಂದ ಇರುವಂತೆ ಗುತ್ತಿಗೆದಾರರು ಎಚ್ಚರ ವಹಿಸಬೇಕು. ಸಾರ್ವಜನಿಕರು ಕಾಮಗಾರಿಗಳ ಬಗ್ಗೆ ದೂರುಗಳಿದ್ದರೆ ನೇರವಾಗಿ ಶಾಸಕರ ಗಮನಕ್ಕೆ ತರಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ತಾಲೂಕಿನ ವಿವಿಧ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕೊರತೆ ಕಂಡುಬಂದರೆ ಪ್ರಾಮಾಣಿಕವಾಗಿ ಪರಿಹರಿಸಲು ಪ್ರಯತ್ನಿಸುತ್ತೇನೆ. ನನ್ನ ಅವಧಿಯಲ್ಲಿ ತಾಲೂಕಿನಾದ್ಯಂತ ಹಲವಾರು ಸೇತುವೆಗಳು, ನಗರದಲ್ಲಿ ತಹಸೀಲ್ದಾರ್ ಕಚೇರಿ, ಆರ್​ಟಿಒ ಕಚೇರಿ ಕಟ್ಟಡ ನೂತನವಾಗಿ ನಿರ್ವಿುಸಲಾಗಿದೆ. ಇದು ಪ್ರಗತಿಯ ಸಂಕೇತ ಎಂದರು.

ಹಳಿಯಾಳ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಧಾಕರ ಕಟ್ಟಿಮನಿ ಮಾತನಾಡಿ, ಚನ್ನಮ್ಮ ವೃತ್ತದಿಂದ ಅಂಬೇವಾಡಿ 3.15 ಲಕ್ಷ ರೂ., ನಾನಾ ಕೆಸರೋಡಗಾದಿಂದ ಗೋಬ್ರಾಳವರೆಗೆ 4.80 ಲಕ್ಷ ರೂ. ಹಾಗೂ ಆಲೂರು ಪಂಪ್ ಹೌಸ್ ಹತ್ತಿರದ ರಸ್ತೆ 70 ಲಕ್ಷ ರೂಪಾಯಿ ಸೇರಿ 8. 65 ಕೋಟಿ ರೂಪಾಯಿಗಳ ರಸ್ತೆ ಡಾಂಬರೀಕರಣ ಕಾಮಗಾರಿ ಇದಾಗಿದೆ. ಮಳೆಗಾಲ ಸೇರಿ 18 ತಿಂಗಳಲ್ಲಿ ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಪೌರಾಯುಕ್ತ ವಿವೇಕ ಬನ್ನೆ, ತಹಸೀಲ್ದಾರ್ ಶೈಲೇಶ ಪರಮಾನಂದ, ಹಳಿಯಾಳ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಸಂತೋಷ ವಿ. ಅಥಣಿ, ದಾಂಡೇಲಿ ನಗರಸಭೆ ಅಧ್ಯಕ್ಷ ಅಶ್ಪಾಕ್ ಶೇಖ್, ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾ ಜಾಧವ, ಅಂಬೇವಾಡಿ ಗ್ರಾಪಂ ಅಧ್ಯಕ್ಷ ಜಿ.ಇ. ಪ್ರಕಾಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಹಾಗೂ ನಗರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net