ಹುಬ್ಬಳ್ಳಿ-ಧಾರವಾಡ ಜನ ಮಲಪ್ರಭೆ ಋಣ ತೀರಿಸಲಿ

Raita Hutatma Dina
Published on

ನವಲಗುಂದ: ಮಲಪ್ರಭಾ ನದಿ ನೀರನ್ನು ಕೃಷಿ ಚಟುವಟಿಕೆಗಾಗಿ ಮೀಸಲಿಡಬೇಕೆ ಹೊರತು ಹುಬ್ಬಳ್ಳಿ ಧಾರವಾಡದ ಜನತೆಗೆ ಕುಡಿಯುವ ನೀರು ನೀಡಲು ಅಲ್ಲ. ಆದಾಗ್ಯೂ ಕುಡಿಯುವ ನೀರಿಗಾಗಿ ಮಲಪ್ರಭೆಯ ಶೇ. 50 ನೀರು ಮೀಸಲಿಡಲಾಗಿದೆ. ಹೀಗಾಗಿ ಅವಳಿ ನಗರದ ಜನತೆ ಮಹದಾಯಿ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ತಮ್ಮ ಋಣ ಸಂದಾಯ ಮಾಡಬೇಕು ಎಂದು ರೈತ ಮುಖಂಡ ಲೋಕನಾಥ ಹೆಬಸೂರ ಹೇಳಿದರು.

ಪಟ್ಟಣದಲ್ಲಿ ಜು. 21ರಂದು ಆಯೋಜನೆಗೊಂಡಿರುವ ರೈತ ಹುತಾತ್ಮ ದಿನಾಚಣೆ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜುಲೈ 21ರಂದು 4 ಜಿಲ್ಲೆಯಿಂದ ರೈತರು ಹಾಗೂ ಇತರ ಎಲ್ಲ ಸಂಘಟನೆಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ. ಬೆಳಗ್ಗೆ 9 ಗಂಟೆಗೆ ನಗರದ ಗಣಪತಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ರೈತ ವೀರಗಲ್ಲಿಗೆ ಮಾಲಾರ್ಪಣೆ ಮಾಡಲಾಗುವುದು. ನಂತರ ಶ್ರದ್ದಾಂಜಲಿ ಸಲ್ಲಿಸಿ ವೇದಿಕೆ ಕಾರ್ಯಕ್ರಮ ಆರಂಭಿಸಲಾಗುವುದು. ರೈತರಿಗೆ ಕುಡಿಯುವ ನೀರು, ಅಲ್ಪೋಪಾಹಾರ ಹಾಗೂ ರಕ್ಷಣಾ ವ್ಯವಸ್ಥೆ ಮಾಡಲಾಗುವುದು ಎಂದರು.

ಒಗ್ಗಟ್ಟಿನ ವೇದಿಕೆಯಾಗಲಿ

ರೈತ ಮುಖಂಡ ಶಂಕರ ಅಂಬಲಿ ಮಾತನಾಡಿ, ಎಲ್ಲ ರೈತರು ಒಟ್ಟಾಗಿ ಸೇರಿ ಏನಾದರೂ ಪರಿಹಾರ ಕಾಣಲಿಕ್ಕೆ ಪ್ರಯತ್ನಿಸೋಣ ಈ ಬಾರಿಯ ಜುಲೈ 21ರ ರೈತ ಹುತಾತ್ಮ ದಿನಾಚರಣೆ ವಿಶೇಷವಾಗಿರಲಿ. ಜತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವುದಕ್ಕೆ ಎಲ್ಲ ರೈತಪರ ಸಂಘಟನೆಗಳು ಒಗ್ಗೂಡುವ ಮಹಾವೇದಿಕೆಯಾಗಲಿ ಎಂದರು.

ಜನಪ್ರತಿನಿಧಿಗಳಿಗಿಲ್ಲ ಅವಕಾಶ

ಯಾವ ಜನಪ್ರತಿನಿಧಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರೋ, ಅಂಥವರನ್ನು ಆಯ್ಕೆ ಮಾಡಿ ವಿಧಾನ ಸೌಧ, ಸಂಸತ್ ಭವನಕ್ಕೆ ಕಳಿಸಿದ್ದೇವೆ. ಅವರು ಅಲ್ಲಿ ನಮ್ಮ ಪರವಾಗಿ ಹೋರಾಟ ಮಾಡಲಿ. ಅದು ಬಿಟ್ಟು ಹುತಾತ್ಮ ರೈತರಿಗೆ ಮಾಲಾರ್ಪಣೆ ಮಾಡುವ ನೆಪದಲ್ಲಿ ಇಲ್ಲಿಗೆ ಬರುವುದು ಬೇಡ. ಒಂದುವೇಳೆ ಯಾರಾದರೂ ವಿರೋಧದ ನಡುವೆಯೂ ಇಲ್ಲಿ ಬಂದರೆ ಅವರ ಯೋಗ್ಯತೆ ಏನೆಂಬುದನ್ನು ಅವರೇ ನಿರ್ಧರಿಸಿಕೊಳ್ಳಲಿ ಎಂದು ಸಭೆಯಲ್ಲಿದ್ದ ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ತಡಹಾಳದ ಶಿವಯೋಗಿ ಸ್ವಾಮೀಜಿ, ಶಾಂತವೀರಯ್ಯ ಹಿರೇಮಠ, ಒಕ್ಕೂಟದ ಅಧ್ಯಕ್ಷರಾದ ಬೀರಪ್ಪ ದೇಶನೂರು, ಬಾಲಚಂದ್ರ ಸುರಪೂರ, ಶಂಕರಗೌಡ ಪಾಟೀಲ, ಬಸವನಗೌಡ ಪಾಟೀಲ, ಸುರೇಶ ಮೂಲಿಮನಿ, ಈರಣ್ಣ ಅಂಗಡಿ, ರವಿರಾಜ ಶಿಂಧೆ, ಗಣೇಶ ಇಳಿಗೇರ, ಮಹಾದೇವಿ ಹುಯಿಲಗೋಳ, ರಘುನಾಥ ನಡುವಿನಮನಿ, ಶಿರಾಜ ಧಾರವಾಡ, ಶಿವು ಪೂಜಾರ, ಮೈಲಾರಪ್ಪ ವೈದ್ಯ, ದಾದಾ ಮೆಹಬೂಬಸಾಬ್ ನವಲಗುಂದ, ಮಹಾಂತೇಶ ಗೌರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net