ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಹೆಚ್ಚಳವಾಗಲಿ

 ಹನೂರಿನಲ್ಲಿ ಮಹಿಳೋದಯ ಮಹಿಳಾ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಯಿತು. ಲಿಲ್ಲಿಮೇರಿ, ಚಂದ್ರಮ್ಮ, ರಾಜಮ್ಮ, ಮಧು ಇತರರು ಇದ್ದರು.
ಹನೂರಿನಲ್ಲಿ ಮಹಿಳೋದಯ ಮಹಿಳಾ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಯಿತು. ಲಿಲ್ಲಿಮೇರಿ, ಚಂದ್ರಮ್ಮ, ರಾಜಮ್ಮ, ಮಧು ಇತರರು ಇದ್ದರು.
Published on

ಹನೂರು: ಹೆಣ್ಣು ಮಕ್ಕಳು, ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರ ಖಂಡಿಸಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿಯನ್ನು ಹೆಚ್ಚಿಸುವಂತೆ ಆಗ್ರಹಿಸಿ ಶುಕ್ರವಾರ ಪಟ್ಟಣದಲ್ಲಿ ಮಹಿಳೋದಯ ಮಹಿಳಾ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಯಿತು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯದ ಭವನದಲ್ಲಿ ನೆರೆದಿದ್ದ ಒಕ್ಕೂಟದ ನೂರಾರು ಮಹಿಳೆಯರು ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿ ಮುಂಭಾಗ ಜಮಾಯಿಸಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಲಯ ಸಂಯೋಜಕಿ ಲಿಲ್ಲಿಮೇರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಕೊಲೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಮಹಿಳೆಯರ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಕಾನೂನನ್ನು ರೂಪಿಸಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಪೊಲೀಸ್ ಇಲಾಖೆ ಮಾಹಿತಿ ಪ್ರಜಕಾರ 2025ರ ಜುಲೈ ಅಂತ್ಯದವೆರೆಗೆ 340 ಅತ್ಯಾಚಾರ, 3,089 ಪೋಕ್ಸೋ, 3,643 ಲೈಂಗಿಕ ಕಿರುಕುಳ ಹಾಗೂ 18 ವರ್ಷದೊಳಗಿನ 25 ಸಾವಿರ ಹೆಣ್ಣು ಮಕ್ಕಳು ಗರ್ಭೀಣಿಯಾಗಿರುವ ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣ ದಾಖಲಾಗಿಲ್ಲ. ಇದರಿಂದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಭಯದ ವಾವರಣದಲ್ಲಿ ಬದುಕುವಂತಾಗಿದೆ. ಆದ್ದರಿಂದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವುದರ ಜತೆಗೆ ಮಹಿಳೆಯರ ರಕ್ಷಣೆಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ತಿಳಿಸಿದರು.

ಪಿಂಚಣಿ ಹೆಚ್ಚಿಸಿ: ಇನ್ನು ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ, ವಿಧವೆ ಹಾಗೂ ಅಂಗವಿಕಲರಿಗೆ ಸರ್ಕಾರ ತಿಂಗಳಿಗೆ 600 ರೂ.ನಿಂದ 800 ರೂ.ವರೆಗೆ ಪಿಂಚಣಿ ನೀಡುತ್ತಿದೆ. ಆದರೆ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಪಿಂಚಣಿ ಹಣ ಜೀವನ ನಿರ್ವಹಣೆಗೆ ಸಾಲುತ್ತಿಲ್ಲ. ಆದ್ದರಿಂದ ಪಿಂಚಣಿ ಮೊತ್ತವನ್ನು 3 ಸಾವಿರ ರೂಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಮನವಿ ಪತ್ರವನ್ನು ಸ್ವೀಕರಿಸಿದ ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು. ಒಕ್ಕೂಟದ ಅಧ್ಯಕ್ಷೆ ಚಂದ್ರಮ್ಮ, ಕಾರ್ಯದರ್ಶಿ ಅನಿತಾ, ಕೊಳ್ಳೇಗಾಲ ವಲಯ ಸಂಯೋಜಕ ನಾಗಸುಂದರ್, ಸದಸ್ಯರಾದ ರಾಜಮ್ಮ, ಮಹದೇವಮ್ಮ, ಮಧು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net