ಮುಂಬರುವ ಚುನಾವಣೆಗೆ ಪಕ್ಷ ಸಂಘಟಿಸಲಿ

oppo_2
ಹನೂರಿನಲ್ಲಿ ಮಾಜಿ ಶಾಸಕ ಆರ್.ನರೇಂದ್ರ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
Published on

ಹನೂರು: ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರು ಒಗ್ಗಟ್ಟಿನಿಂದ ಬೂತ್ ಮಟ್ಟದಲ್ಲಿ ಪಕ್ಷವನ್ನು ಇನ್ನುಷ್ಟು ಸಂಘಟಿಸುವ ಮೂಲಕ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚು ಮತ ಬರುವಂತೆ ಮಾಡಲು ನೋಡಿಕೊಳ್ಳಬೇಕು ಎಂದು ಮಾಜಿ ಶಾಸಕ ಆರ್.ನರೇಂದ್ರ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಸುನೀಲ್ ಬೋಸ್ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.

ಯಾವುದೇ ಪಕ್ಷವಾದರೂ ಸರಿಯೇ ಅಲ್ಲಿನ ಕಾರ್ಯಕರ್ತರು ಪರಸ್ಪರ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಪಕ್ಷದ ಸಂಘಟನೆಯ ಜತೆಗೆ ಅಭ್ಯರ್ಥಿಗಳು ಗೆಲ್ಲಲು ಸಾಧ್ಯ. ಕಾರ್ಯಕರ್ತರಲ್ಲಿ ಒಗ್ಗಟ್ಟು ಮುಖ್ಯ. ಈ ಹಿನ್ನೆಲೆಯಲ್ಲಿ ವೈಯಕ್ತಿಕ ವೈಮನಸ್ಸುಗಳಿದ್ದಲ್ಲಿ ಅದನ್ನು ಬಿಡಬೇಕು. ಪಕ್ಷಕ್ಕೆ ಸೇರಲು ಇಚ್ಛಿಸುವವರನ್ನು ಮುಕ್ತ ಮನಸ್ಸಿನಿಂದ ಸೇರ್ಪಡೆಗೊಳಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಪಕ್ಷ ಸದೃಢಗೊಳ್ಳಲು ಸಾಧ್ಯ ಎಂದರು.

ಲೀಡ್‌ನಿಂದ ಸಂತಸ: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ ಕಳೆದ ವಿಧಾನಸಭೆಯಲ್ಲಿ ಕೆಲವು ಕಾರಣದಿಂದ ಹನೂರಿನಲ್ಲಿ ಸೋಲಬೇಕಾಯಿತು. ಈ ಬಗ್ಗೆ ನಾಯಕರು ಪ್ರಸ್ತಾಪಿಸುತ್ತಿದ್ದರು. ಇದರಿಂದ ಮನಸ್ಸಿಗೆ ನೋವು ಉಂಟಾಗುತ್ತಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಸುನೀಲ್ ಬೋಸ್ ಅವರಿಗೆ ಉಳಿದೆಲ್ಲಾ ಕ್ಷೇತ್ರಗಳಿಗಿಂತಲೂ ಹನೂರು ಕ್ಷೇತ್ರ 37 ಸಾವಿರ ಮತವನ್ನು ಲೀಡ್ ಕೊಟ್ಟಿರುವುದು ಸಂತಸ ತಂದಿದೆ. ಇದಕ್ಕೆ ನಿಮ್ಮ ಶ್ರಮ ಅಪಾರ. ಹಾಗಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಅಭಿವೃದ್ಧಿಗೆ ಗಮನ: ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದೆ. ಆದರೆ ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನಹರಿಸುತ್ತಿರಲಿಲ್ಲ. ಆದರೆ ಇಲ್ಲಿನ ಶಾಸಕರಿಗೆ ಇಚ್ಛಾಶಕ್ತಿಯ ಕೊರೆತೆಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜನತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ನೀಡಲಾಗುವುದು. ಈ ವಿಚಾರದಲ್ಲಿ ಇತರೆ ಪಕ್ಷದ ಕಾರ್ಯಕರ್ತರಿಗೆ ತಕ್ಕ ಉತ್ತರ ನೀಡಬೇಕು. ಕ್ಷೇತ್ರದ ಅಭಿವೃದ್ಧಿ ಸಂಬಂಧ ಈಗಾಗಲೇ ಸಚಿವ ಎಚ್.ಸಿ ಮಹದೇವಪ್ಪ ಅವರ ಗಮನಕ್ಕೆ ತಂದಿದ್ದು, ಅಗತ್ಯ ಭರವಸೆ ನೀಡಿದ್ದಾರೆ ಎಂದರು.

ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನೂರಿನ ಮುಕುಂದವರ್ಮ, ರಾಮಾಪುರದ ಈಶ್ವರ್, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯ್ಕ ಹಾಗೂ ಪಪಂ ಉಪಾಧ್ಯಕ್ಷ ಗಿರೀಶ್ ಮಾತನಾಡಿದರು. ಸಭೆಯಲ್ಲಿ ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್, ಟೌನ್ ಅಧ್ಯಕ್ಷ ಮಾದೇಶ್, ಮುಖಂಡರಾದ ಉದ್ದನೂರು ಸಿದ್ದರಾಜು, ಮಣಿ, ವೆಂಕಟರಮಣನಾಯ್ಡು, ಚಿಕ್ಕತಮ್ಮಯ್ಯ, ಬೂದುಬಾಳು ರಾಜೇಶ್, ಮಾದೇವ, ನಟರಾಜು ಇತರರಿದ್ದರು.

ಸಂಭ್ರಮಾಚರಣೆ: ಸುನೀಲ್ ಬೋಸ್ ಅತ್ಯಧಿಕ ಮತದ ಅಂತರದಿಂದ ಜಯಗಳಿಸಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಕಚೇರಿ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net