

ತಿ.ನರಸೀಪುರ: ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸಿ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಾಯಕತ್ವಕ್ಕೆ ಶಕ್ತಿಯನ್ನು ತುಂಬಲು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಎಂದು ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದ ಜೆಎಸ್‌ಎಸ್ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಂಘಟನಾತ್ಮಕ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಂದಿನ ಗ್ರಾಮ ಪಂಚಾಯಿತಿ, ಪುರಸಭೆ, ಜಿಪಂ ಹಾಗೂ ತಾಪಂ ಚುಣಾವಣೆಗಳಲ್ಲಿ ಪಕ್ಷ ಗೆಲ್ಲುವ ಒಂದೊಂದು ಸ್ಥಾನವೂ ಕೂಡ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲು ಮೆಟ್ಟಿಲುಗಳಾಗಬೇಕಿದೆ ಎಂದರು.
ರಾಜ್ಯ ಸರ್ಕಾರದ ಅಧಿಕಾರ ಹಂಚಿಕೆ ಕಿತ್ತಾಟದಿಂದ ಯಾವ ಸಂದರ್ಭದಲ್ಲಾದರೂ ಎದುರಾಗುವ ಚುನಾವಣೆಗೆ ಬಿಜೆಪಿ ಕಾರ್ಯಕರ್ತರು ಸಜ್ಜಾಗಿರಬೇಕು. ಗ್ರಾಮಾಂತರ ಜಿಲ್ಲಾ ಸಮಿತಿಯಲ್ಲಿ ತಿ.ನರಸೀಪುರ ಕ್ಷೇತ್ರದವರೇ ಹೆಚ್ಚಿನ ಸ್ಥಾನಮಾನಗಳನ್ನು ಪಡೆದುಕೊಂಡಿದ್ದರೂ ಸಭೆಯಲ್ಲಿ ನೆರೆದಿರುವ ಸಭಿಕರ ಸಂಖ್ಯೆಗೆ ಸರಿ ಕಾಣುತ್ತಿಲ್ಲ ಎಂದು ಮುಖಂಡರು ಹಾಗೂ ಕಾರ್ಯಕರ್ತರ ಕಿವಿ ಹಿಂಡಿದ ಜಿಲ್ಲಾಧ್ಯಕ್ಷರು, ಪಕ್ಷದ ಸಂಘಟನೆಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸದವರನ್ನು ಬದಲಾವಣೆ ಮಾಡುವಂತೆ ಕ್ಷೇತ್ರಾಧ್ಯಕ್ಷರಿಗೆ ತಾಕೀತು ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಭರದಲ್ಲಿ ಸಿಎಂ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿಯ ಪರಾಜಿತ ಅಭ್ಯರ್ಥಿ ಎಸ್.ಬಾಲರಾಜ್ ಅವರೇ ಈಗಲೂ ಜನ ಮಾನಸದಲ್ಲಿ ಲೋಕಸಭಾ ಸದಸ್ಯ ಆಗಿದ್ದಾರೆ. ಸಚಿವ ಮತ್ತು ಸಂಸದರ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಸನ್ಮಾನ: ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಹಾಗೂ ಹೆಲ್ತ್ ಕೇರ್ ಎಕ್ಸ್‌ಲೆನ್ಸ್ ಪ್ರಶಸ್ತಿ ಪುರಸ್ಕೃತ ಹಿರಿಯ ಶಸ್ತ್ರ ಚಿಕಿತ್ಸಕ, ಪರಾಜಿತ ಅಭ್ಯರ್ಥಿ ಪರಾಜಿತ ಅಭ್ಯರ್ಥಿ ಡಾ.ಎಂ.ರೇವಣ್ಣ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಹಲವರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾಜಿ ಶಾಸಕ ಎಸ್ ಬಾಲರಾಜು, ಕ್ಷೇತ್ರಾಧ್ಯಕ್ಷ ಶಿವಕುಮಾರ್(ಸತ್ಯರಾಜ್) , ಮಾಜಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ನಿವೃತ್ತ ಜಂಟಿ ನಿರ್ದೇಶಕ ಹೆಳವರ ಹುಂಡಿ ಸಿದ್ದಪ್ಪ, ವಕ್ತಾರ ಎನ್.ವಿ.ಫಣೇಶ್, ಪುರಸಭ ಸದಸ್ಯರಾದ ರೂಪಶ್ರೀ ಪರಮೇಶ್, ಎಸ್.ಕೆ.ಕಿರಣ್, ಗ್ರಾಪಂ ಉಪಾಧ್ಯಕ್ಷೆ ಭಾಗ್ಯಮ್ಮ, ಮುಖಂಡರಾದ ಜಯರಾಮೇಗೌಡ, ಮಡವಾಡಿ ಮಹೇಶ್, ಕರೋಹಟ್ಟಿ ಮಹದೇವಯ್ಯ, ಮೂಗೂರು ಸಿದ್ದರಾಜು, ದಯಾನಂದ ಪಟೇಲ್, ಮಹದೇವಸ್ವಾಮಿ, ಪಾಪಣ್ಣ, ಮೋಹನ, ಸಾಮ್ರಾಟ್ ಸುಂದ್ರೇಶನ್, ರಂಗಸ್ವಾಮಿ, ಕರೋಹಟ್ಟಿ ಬಸವರಾಜು, ನಂಜುಂಡಸ್ವಾಮಿ, ಎನ್.ಎಂ.ರಾಮಚಂದ್ರ, ಮೂಗೂರು ಎಂ. ಚಂದ್ರಶೇಖರ, ರತ್ನರಾಜ್, ಬಸವರಾಜು, ಡಾ.ಟಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಸಿ.ಎಂ.ಪ್ರಕಾಶ್, ಸೋಮಶೇಖರಪ್ಪ, ತೊಟ್ಟವಾಡಿ ಅನಿಲ್, ಎಸ್.ಬಿ.ಸುರೇಶ್, ಆಡಿಟರ್ ಮಂಜುನಾಥ್, ಎನ್.ಲೋಕೇಶ್, ರಾಮಸ್ವಾಮಿ, ರಾಜಶೇಖರ ಇತರರು ಇದ್ದರು.
ಕೋಟ್
ಸಾಮಾನ್ಯ ಜನರ ಕೈಗೆ ಸಿಗದೆ, ದೂರವಾಣಿ ಕರೆಯ ಸಂಪರ್ಕಕ್ಕೂ ಲಭ್ಯವಾಗದ ಸಂಸದ ಸುನೀಲ್ ಬೋಸ್ ಅವರನ್ನು ಗೆಲ್ಲಿಸಿದ್ದಕ್ಕೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಜನರು ಪಶ್ಚಾತಾಪ ವ್ಯಕ್ತಪಡಿಸುತ್ತಿದ್ದಾರೆ. ಮನೆ ಮುಂದೆ ಗಂಟೆಗಟ್ಟಲೆ ಕಾದು ಸುಸ್ತಾದ ಬಳಿಕ ಜನರ ಕೈಗೆ ಸಿಕ್ಕರೆ ಅವರಿವರನ್ನು ಭೇಟಿಯಾಗಿ ಎಂಬ ಸಬೂಬು ಹೇಳಿ ಕಣ್ಮರೆಯಾಗಿಬಿಡುತ್ತಾರೆ ಎಂದು ಜನರು ನನ್ನ ಬಳಿ ಅಲವತ್ತುಕೊಳ್ಳುತ್ತಾರೆ.
ಎಸ್.ಬಾಲರಾಜ್, ಬಿಜೆಪಿಯ ಪರಾಜಿತ ಅಭ್ಯರ್ಥಿ, ಚಾಮರಾಜನಗರ ಲೋಕಸಭಾ ಕ್ಷೇತ್ರ