ಹಕ್ಕುಪತ್ರ ಕೊಡಿಸಲು ಸಂಸದರು ಇಚ್ಛಾಶಕ್ತಿ ಪ್ರದರ್ಶಿಸಲಿ

SDP ITAGI GRAPUM
Published on

ಸಿದ್ದಾಪುರ: ಅತಿಕ್ರಮಣದಾರರಿಗೆ ಹಕ್ಕು ಕೊಡಿಸುವ ಸಲುವಾಗಿ ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಬಡವರಿಗೆ ಹಕ್ಕು ಪತ್ರ ಕೊಡಿಸಲು ಕಾಳಜಿ ತೋರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲೂಕಿನ ಇಟಗಿ ಗ್ರಾಪಂ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು. ಅತಿಕ್ರಮಣದಾರರಿಗೆ ಹಕ್ಕು ಪತ್ರ ಕೊಡಿಸುವ ಸಲುವಾಗಿ 75 ವರ್ಷದ ದಾಖಲೆ ಬದಲಾಗಿ 25 ವರ್ಷಕ್ಕೆ ಸೀಮಿತಗೊಳಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ್ದು, ರಾಜ್ಯದ ಸಂಸದರು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದರಿಂದ ನಿಯಮದಲ್ಲಿ ಸರಳೀಕರಣ ತಂದು ಹಕ್ಕು ಪತ್ರ ಕೊಡಿಸಲು ಮುಂದಾಗಬೇಕು. ಜಿಲ್ಲೆಯಲ್ಲಿ ಅಡಕೆಗೆ ಕೊಳೆ ಜತೆಗೆ ದಿನಕ್ಕೊಂದು ರೋಗ ಬಾಧಿಸುತ್ತಿದೆ. ರೈತರು ಅಡಕೆ ಒಂದನ್ನೆ ಅವಲಂಬಿಸದೇ ಉಪ ಬೆಳೆಗಳನ್ನು ಬೆಳೆಯಬೇಕಿದೆ. ರಾಜ್ಯದ ಅಡಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರ ಹೊರದೇಶದ ಅಡಕೆ ಆಮದಿಗೆ ಮುಕ್ತ ಅವಕಾಶ ನೀಡಿದೆ. ರಾಜ್ಯದ ಸಂಸದರು ಧ್ವನಿ ಎತ್ತದಿದ್ದರೆ ರೈತರ ಸ್ಥಿತಿ ಚಿಂತಾಜನಕವಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ಗಿರಿಜಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ರಾಮಚಂದ್ರ ನಾಯ್ಕ, ಸದಸ್ಯರಾದ ಮಹೇಶ ನಾಯ್ಕ, ವೆಂಕಟರಮಣ ನಾಯ್ಕ, ಪಾರ್ವತಿ ನಾಯ್ಕ, ಪ್ರಸನ್ನ ಹೆಗಡೆ, ಕನ್ನೆ ಹರಿಜನ, ಸಾವಿತ್ರಿ ತಳವಾರ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಪಿಡಿಒ ಮಂಜು ನಾಯ್ಕ, ಜಿಪಂ ಇಂಜಿನಿಯರ್ ಮಣಿಕಂಠ, ಇಟಗಿ ಸೊಸೈಟಿ ಅಧ್ಯಕ್ಷ ರಮೇಶ ಹೆಗಡೆ, ಪ್ರಮುಖರಾದ ವಸಂತ ನಾಯ್ಕ ಮನಮನೆ, ಸಿ.ಆರ್. ನಾಯ್ಕ, ಉಮೇಶ ನಾಯ್ಕ ಕಡಕೇರಿ, ಪ್ರಸನ್ನ ಹೆಗಡೆ, ಗಿರಿಜಾ ಗೌಡ, ಲಲಿತಾ ನಾಯ್ಕ, ಇತರರಿದ್ದರು. ಗ್ರಾಪಂ ಸದಸ್ಯ ಮಹೇಶ ನಾಯ್ಕ ಹಾಗೂ ಸುರೇಂದ್ರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net