ಸರ್ಕಾರಿ ಶಾಲೆ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಕೈಜೋಡಿಸಲಿ

Government School
Published on

ಹಾನಗಲ್ಲ: ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮದುವೆ ಇತರ ಶುಭ ಕಾರ್ಯಗಳ ಸಂದರ್ಭದಲ್ಲಿ ಮಾಡುವ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಅದೇ ಹಣದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡಿದರೆ ಸಾರ್ಥಕತೆ ಮೂಡಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಕ್ಯಾಸನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಿದೆ. ಇದಕ್ಕಾಗಿ ನಾವೆಲ್ಲರೂ ಕೈ ಜೋಡಿಸಿ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಬೇಕಿದೆ. ಗ್ರಾಮೀಣ ಶಾಲೆಗಳಲ್ಲಿ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಂಡಿರುವವರು ಒಂದು ಬಾರಿ ಶಾಲೆಗಳತ್ತ ತಿರುಗಿ ನೋಡಬೇಕು. ಡೆಸ್ಕ್, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ವಾಟರ್ ಫಿಲ್ಟರ್, ಕೊಠಡಿಗಳು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಬೇಕು. ಸೌಲಭ್ಯ ಒದಗಿಸುವುದು ಸರ್ಕಾರದ ಹೊಣೆ ಎನ್ನುವ ಭಾವನೆಯಿಂದ ಹೊರಬರೋಣ. ಸಂಘ, ಸಂಸ್ಥೆಗಳು, ದಾನಿಗಳನ್ನು ಮನವೊಲಿಸಿ ಅವರಿಂದ ಸರ್ಕಾರಿ ಶಾಲೆಗಳಿಗೆ ನೆರವು ಪಡೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ ತಾಲೂಕಿನ ನಿಟಗಿನಕೊಪ್ಪ ಗ್ರಾಮದಲ್ಲಿ ದಾನಿಗಳ ಮೂಲಕ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಪುನರ್ ನಿರ್ವಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ವಿಜಯಕಾಂತ ಪಾಟೀಲ, ವೀರಭದ್ರಗೌಡ ಪಾಟೀಲ, ನಾಗರಾಜ ಗಾಜಿಪುರ, ಹರೀಶ ಈಳಿಗೇರ, ಬಸಣ್ಣ ಪೂಜಾರ, ಚಂದ್ರು ಸುಣ್ಣದಕೊಪ್ಪ, ಮಲ್ಲಿಕಾರ್ಜುನ ಪಾಟೀಲ, ರಾಜೇಂದ್ರ ರೆಡ್ಡೇರ, ಚನ್ನವೀರಪ್ಪ ಗಡಿಯಂಕನಹಳ್ಳಿ ಸೇರಿದಂತೆ ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮಸ್ಥರು, ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net