ಹಳೇ ಪಿಂಚಣಿ ವ್ಯವಸ್ಥೆ ಮರು ಜಾರಿಯಾಗಲಿ

NPS Eployees
Published on

ರಟ್ಟಿಹಳ್ಳಿ: ಹಳೇ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿ ಮಾಡಿ ನಿವೃತ್ತ ನೌಕರರ ಸಂಘಕ್ಕೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದಿಂದ ತಹಸೀಲ್ದಾರ್ ಕೆ. ಗುರುಬಸವರಾಜ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ಜಗದೀಶ ಕುಮಾರ ಕಠಾರೆ ಮಾತನಾಡಿ, ಎನ್​ಪಿಎಸ್ ನೌಕರರ ಸಂಘವು ರಾಷ್ಟ್ರ ಮಟ್ಟದಲ್ಲಿ ಎನ್​ಎಂಒಪಿಎಸ್ ಸಹಯೋಗ ಹೊಂದಿದೆ. ನವದೆಹಲಿಯಲ್ಲಿ ನಡೆದ ಎನ್​ಎಂಒಪಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ತೀರ್ವನದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್​ಪಿಎಸ್ ನೌಕರರ ಸಂಘ ಮತ್ತು ಎನ್​ಎಂಒಪಿಎಸ್ ಸಂಘಟನೆಗಳು ಒಪಿಎಸ್ ಜಾರಿ ಮಾಡುವಂತೆ ನಡೆಸಿದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರವು ಎನ್​ಪಿಎಸ್ ಯೋಜನೆಯನ್ನು ಬದಲಾಯಿಸಿ ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ತರಲು ತೀರ್ವನಿಸಿದೆ. ಪ್ರಸ್ತುತ ಯೋಜನೆಯು ಷೇರು ಮಾರುಕಟ್ಟೆ ಆಧಾರಿತವಾಗಿದ್ದು, ಸರ್ಕಾರಿ ನೌಕರರು ಸಂಧ್ಯಾಕಾಲದ ಬದುಕಿಗೆ ಯಾವುದೇ ಭದ್ರತೆ ಒದಗಿಸುವ ಅಂಶ ಹೊಂದಿಲ್ಲ. ಸೆ. 26ರಂದು ರಾಷ್ಟ್ರಾದ್ಯಂತ ಈ ಸಂಘಟನೆಗಳ ಮೂಲಕ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನೋ ಎನ್​ಪಿಎಸ್, ನೋ ಯುಪಿಎಸ್, ಓನ್ಲಿ ಒಪಿಎಸ್ ಎಂಬ ಶೀರ್ಷಿಕೆಯಡಿ ಒಪಿಎಸ್ ಜಾರಿಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಒಪಿಎಸ್ ಜಾರಿ ಮಾಡಲು ನೀಡಿರುವ ಭರವಸೆಯನ್ನು ತಕ್ಷಣ ಈಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಂಘದ ತಾಲೂಕು ಕಾರ್ಯದರ್ಶಿ ಷಣ್ಮುಖ ಜಿ.ಎಚ್., ಲಿಂಗರಾಜ ಪಾಟೀಲ, ಬಸವರಾಜ ಚಂದಳ್ಳೇರ, ಚನ್ನಕೇಶವ ಪಿ., ಬಸವರಾಜ ಗೂಳಣ್ಣನವರ, ಶಂಕರ ಎಂ.ಎ., ಆಶಾ ಬಾಯಿ, ಸೌಮ್ಯಾ ಬಂಗೀಗೌಡರ, ಅಂಬಿಕಾ ಎಮ್ಮೇರ, ಸುಜಾತ ಬಿ. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net